Tuesday, January 21, 2025
ಸುದ್ದಿ

ವೃತ್ತಿಯನ್ನು ಪ್ರೀತಿಸಿದಾಗ ಕಷ್ಟಕರವಾದದ್ದೂ ಸುಲಲಿತವೆನಿಸುತ್ತದೆ: ಅಶೋಕ್ – ಕಹಳೆ ನ್ಯೂಸ್

ಪುತ್ತೂರು: ವರದಿಗಾರನಾದವನಿಗೆ ಕನಿಷ್ಟ ಸಮಯದಲ್ಲಿ ಗರಿಷ್ಟ ಮಾಹಿತಿಯನ್ನು ಸಂಗ್ರಹಿಸುವುದು ಅನಿವಾರ್ಯವಾಗುತ್ತದೆ. ಸಮಯದ ಪರಿವೆಯಿಲ್ಲದೆಯೇ ದುಡಿಯಬೇಕಾಗುತ್ತದೆ. ಮಾಡುವ ಕೆಲಸವನ್ನು ಪ್ರೀತಿಸಿದಾಗ ಅಸಾಧ್ಯವೆನಿಸಿದ್ದು ಸುಲಲಿತವೆನಿಸಿಕೊಳ್ಳುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ದಿಗ್ವಿಜಯ ವಾಹಿನಿಯ ಉಡುಪಿ ಜಿಲ್ಲಾ ವರದಿಗಾರ ಅಶೋಕ್ ಪೂಜಾರಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಬುಧವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಹಂತದಲ್ಲಿ ಪ್ರಾಯೋಗಿಕ ಕಲಿಕೆಗೆ ಬೋಧನೆಯೊಂದಿಗೆ ಸಮಾನ ಪ್ರಾಧಾನ್ಯತೆಯನ್ನು ನೀಡಿದಾಗ ವೃತ್ತಿ ಬದುಕು ಹೊಸತೆನಿಸಿಕೊಳ್ಳಲಾರದು. ಕಠಿಣ ಪರಿಶ್ರಮ ಹಾಗೂ ಕಲಿಯುವ ಆಸಕ್ತಿ ವೃತ್ತಿಯಲ್ಲಿ ಬೆಳೆಯಲು ಸಹಕಾರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಸ್ಥಿತಿ ಹಾಗೂ ವಿಷಯವನ್ನು ಸರಿಯಾಗಿ ಅರ್ಥೈಸಿಕೊಂಡಾಗ ಸನ್ನಿವೇಶವನ್ನು ವಿಶ್ಲೇಷಿಸಬಲ್ಲ ಸಾಮಥ್ರ್ಯವು ವೃದ್ಧಿಗೊಳ್ಳುತ್ತದೆ. ಯಾವುದೇ ಸಂದರ್ಭದಲ್ಲಿಯೂ ನಿಜಾಂಶವನ್ನು ಸುಳ್ಳಿನಿಂದ ಬೇರ್ಪಡಿಸಿ ವರದಿ ಮಾಡುವ ಚಾಕಚಕ್ಯತೆ ಅಮೂಲ್ಯವೆನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಸ್ವಾಗತಿಸಿ, ಪ್ರಸ್ತಾವನೆಗೈದ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರೂ ಸರಳತೆ ಹಾಗೂ ಸೌಜನ್ಯತೆ ಆಸ್ತಿಯಾಗಿರಬೇಕು. ಯಶಸ್ಸಿನ ಹಾದಿಯಲ್ಲಿ ವ್ಯಕ್ತಿಯ ಸಜ್ಜನಿಕೆ ಹಾಗೂ ಹಿರಿಯರ ಹಾರೈಕೆ ಪ್ರೇರಣಾ ಶಕ್ತಿಗಳಾಗಿ ಬೆಂಬಲಿಸುತ್ತವೆ. ವಿಧೇಯತೆ ಹೊಸ ವಿಚಾರಗಳಿಗೆ ತೆರೆದುಕೊಳ್ಳಲು ಸಹಕಾರಿ ಎಂದರು.

ಈ ಸಂದರ್ಭ ವಿಬಾಗದ ಉಪನ್ಯಾಸಕಿಯರಾದ ಸುಶ್ಮಿತಾ ಜಯಾನಂದ್, ಪ್ರಜ್ಞಾ ಬಾರ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ವಂದಿಸಿ, ರಾಧಿಕಾ ಕಾನತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.