ಪುತ್ತೂರು: ಕಾಂಗ್ರೇಸ್ ಪಕ್ಷವು ಜಾತ್ಯಾತೀತ ಪಕ್ಷವಾಗಿದೆ. ಆದರೆ ಬಿ.ಜೆ.ಪಿಯವರು ಧರ್ಮದ ಹೆಸರಿನಲ್ಲಿ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ ಎಂದು ಎಐಸಿಸಿ ಸದಸ್ಯ ಅಮೃತ್ ಶೆಣೈ ಹೇಳಿದರು.
ಅವರು ಬುಧವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ಆಶ್ರಯದಲ್ಲಿ ನಡೆದ ಯುವಶಕ್ತಿ ಮತ್ತು ಭಾರತ ಉಪನ್ಯಾಸದಲ್ಲಿ ಮಾತನಾಡಿದರು.
ಆಸ್ಪತ್ರೆ, ಹೆದ್ದಾರಿ, ವಿಶ್ವವಿದ್ಯಾಲಯ ಇತ್ಯಾದಿ ಆಧುನಿಕ ಸವಲತ್ತುಗಳನ್ನು ನಿರ್ಮಾಣ ಮಾಡುತ್ತಾ ಸಾಗುತ್ತಿದ್ದೇವೆ. ಆದರೆ ಧರ್ಮ ನಿರಾಕ್ಷೇಪ ವ್ಯಕ್ತಿಗಳನ್ನು ನಿರ್ಮಾಣ ಮಾಡದೇ ಹೋದರೆ, ಇವೆಲ್ಲ ಇದ್ದರು ಪ್ರಯೋಜನವು ಏನು? ರಾಜಕೀಯದ ಲಾಭಕ್ಕೊಸ್ಕರ ಯುವಕರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತ ಇದ್ದಾರೆ.
ಇತಿಹಾಸದ ಅರಿವಿಲ್ಲದ ಮುಗ್ಧ ಯುವಕರು ಇದರಿಂದ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ಬಿಜೆಪಿ ಅವರು ಹೇಳುವ ಸುಳ್ಳನ್ನೇ ಸತ್ಯವೆಂದು ನಂಬಿಕೊಂಡಿದ್ದಾರೆ. ಆದ್ದರಿಂದ ದೇಶ, ಅದರಲ್ಲೂ ಕರಾವಳಿ ಪ್ರದೇಶ ಅಪಾಯದಲ್ಲಿದೆ ಎಂದು ವಿಶ್ಲೇಷಿಸಿದರು.
ಭಜರಂಗದಳದಂತಹ ಸಂಘಟನೆಯು ಉನ್ಮಾದ ಸೃಷ್ಟಿಸುತ್ತಿದ್ದು, ಯುವಕರು ತನ್ನ ಜತೆಗೆ ಸೇರಿಕೊಂಡಿದ್ದಾರೆ. ಧರ್ಮಕ್ಕಾಗಿ ಇವರು ಜೀವ ಕೊಡುತ್ತಿದ್ದು, ಧರ್ಮವನ್ನು ಪಾಲನೆ ಮಾಡದೇ ರಕ್ಷಣೆ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಧರ್ಮವನ್ನು ಬಳಕೆ ಮಾಡುತ್ತಿದ್ದಾರೆ.
ರಾಮ ಮೆಚ್ಚುವ ಕೆಲಸ ಮಾಡಿದಾಗ, ಜೈಶ್ರೀರಾಂ ಎಂದು ಹೇಳುತ್ತಾ ತಿರುಗಬೇಕಿಲ್ಲ. ಧರ್ಮದ ಚೌಕಟ್ಟಿನಲ್ಲಿ ಬಾಳಿದರೆ ಸಾಕಾಗುತ್ತದೆ. ಯುವಕರ ತಲೆಯಲ್ಲಿ ಸದ್ವಿಚಾರ ತುಂಬಿದರೆ, ಸರಿ-ತಪ್ಪುಗಳ ವಿವೇಚನೆಗಳನ್ನು ತಿಳಿಹೇಳಿದರೆ ಉತ್ತಮ ಸಮಾಜವು ಹಾಗೂ ದೇಶವು ನಿರ್ಮಾಣವಾಗಲು ಸಾಧ್ಯ ಎಂದರು.
ಜಾತಿ ಮತ್ತು ಧರ್ಮಕ್ಕಿಂತ ಅತೀತವಾದ ನಂಬಿಕೆಯೇ ಜಾತ್ಯಾತೀತತೆಯಾಗಿದೆ. ಪ್ರತಿಯೊಬ್ಬರನ್ನೂ ಪ್ರೀತಿಸಬೇಕು. ಇನ್ನೊಬ್ಬರ ಜಾತಿ ಹಾಗೂ ಧರ್ಮವನ್ನು ದ್ವೇಷಿಸುವುದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಹಿಂದೂಗಳ ಉದ್ಧಾರಕರು ಎನ್ನುವ ಬಿಜೆಪಿಗರು ಜಾತ್ಯಾತೀತತೆಯನ್ನು ಪಾಲಿಸುತ್ತಿಲ್ಲ.
ಹಿಂದೂಗಳ ಉದ್ಧಾರಕರು ಎಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಿದ್ದಾರೆ. ಹಿಂದೂಗಳ ಉದ್ಧಾರಕ್ಕಾಗಿ ಅವರು ಜಾರಿ ಮಾಡಿದ 1 ಕಾನೂನನ್ನಾದರೂ ತಿಳಿಸಿ. ಬಿಜೆಪಿಗರು ಹೇಳುವ ಜಾತ್ಯಾತೀತತೆಯು ಸಂಕುಚಿತ ಮನೋಭಾವದಿಂದ ಕೂಡಿದೆ ಎಂದರು.
ಕಾಂಗ್ರೆಸ್ ಎಂದರೆ ಹಿಂದೂ ವಿರೋಧಿ ಎಂಬ ರೀತಿಯಲ್ಲಿ ಸೂಚಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಜಾತ್ಯಾತೀತತೆಯಡಿ ಬದುಕುತ್ತಿದೆ. ಟಿಪ್ಪು ಜಯಂತಿಯ ಜತೆಗೆ ರಾಮ ಜಯಂತಿಯನ್ನು ಮಾಡಿದೆ. ಜನರಿಗೆ ನಾವು ಇದನ್ನು ಅರ್ಥ ಮಾಡಿಕೊಡಬೇಕು. ಅದಲ್ಲದೆ ಬಿಜೆಪಿ ಎಂದರೆ ಅಪಾಯಕಾರಿ.
ರಾಜಕೀಯ ಲಾಭಕ್ಕಾಗಿ ಅವರು ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಮಾಡಲು ಸಿದ್ಧರಿರುತ್ತಾರೆ. ಇವರ ತಂತ್ರಗಾರಿಕೆಗೆ ಯುವಕರು ಬಲಿಯಾಗದಂತೆ ತಡೆಯಬೇಕಾಗಿದೆ. ನಮ್ಮ ದೇಶಕ್ಕೆ ಅಧಿಕೃತ ಧರ್ಮ ಇಲ್ಲ. ಸರಕಾರಕ್ಕೆ ಅಧಿಕೃತ ಧರ್ಮ ಇಲ್ಲ.
ಸಂವಿಧಾನ ನೀಡಿದ ಮುನ್ನುಡಿಯೇ ನಮ್ಮ ಧರ್ಮ. ದೇಶದ ಸಂಸತ್ತು ನಮ್ಮ ದೇವಸ್ಥಾನ. ಹಿಂದೂ ರಾಷ್ಟ್ರ ಕಟ್ಟುತ್ತೇವೆ ಎಂದು ಹೇಳುವವರು ಸಂಸತ್ತಿನಲ್ಲಿ ಮಸೂದೆ ಪಾಸ್ ಮಾಡಲಿ. ಯುವಕರ ಕೈಗೆ ತಲವಾರು ಕೊಡುವುದು ಬೇಡ ಎಂದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ರೈ, ಬ್ಲಾಕ್ ಉಸ್ತುವಾರಿ ಸುಭೋದ್ ಆಳ್ವ, ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಸಂಚಾಲಕ ಸಂತೋಷ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ವಂದಿಸಿದರು. ವಿಲ್ಮಾ ಗೋನ್ಸಾಲ್ವಿಸ್, ಪೂರ್ಣೇಶ್ ಕಾರ್ಯಕ್ರಮ ನಿರೂಪಿಸಿದರು.