ತುಳು ಸಂಸ್ಕೃತಿಯತ್ತ ಪಾಶ್ಚಿಮಾತ್ಯನ ಒಲವು: ಇಂಗ್ಲೆಂಡ್‌ನಲ್ಲಿ ರಿಲೀಸ್ ಆಗಲಿದೆ ‘ಎ ವಿಲೇಜ್ ಇನ್ ಸೌತ್ ಇಂಡಿಯಾ’ – ಕಹಳೆ ನ್ಯೂಸ್
ತುಳುನಾಡಿನ ಕಲಾ ಶ್ರೀಮಂತಿಕೆಯ ಅಬ್ಬರ ನೋಡುಗರನ್ನ ಸೆಳೆಯದೆ ಇರಲಾರದು, ಯಕ್ಷಗಾನ, ಕೋಲ, ಭೂತಾರಾಧನೆ, ನಾತತಂಬಿಲ ಹೀಗೆ ಹೇಳಿದಷ್ಟು ಮುಗಿಯದ ಭಂಡಾವೇ ಇಲ್ಲಿ ನಲೆಯಾಗಿದೆ, ಇಂತಹ ಪುಣ್ಯ ಮಣ್ಣಿನ ಸುವಾಸನೆಗೆ ಪಾಶ್ಚಿಮಾತ್ಯರು ಮಾರುಹೋಗುತ್ತಿದ್ದಾರೆ.
ಹೌದು, ಇಂಗ್ಲೆಂಡ್ ಪ್ರಜೆಯೊಬ್ಬರು, ತುಳುವರ ಕಲಾ ಶ್ರೀಮಂತಿಕೆಗೆ ಬೆರಗಾಗಿ ಕರಾವಳಿಯಲ್ಲಿ ನೆಲೆಸಿ, ತುಳು ಸಂಸ್ಕೃತಿಯನ್ನು ಅಧ್ಯಯನ ಮಾಡಿ, ಅದನ್ನು ತನ್ನ ನೆಲದವರಿಗೂ ಪರಿಚಯಿಸುವ ನಿಟ್ಟಿನಲ್ಲಿ ಪುಸ್ತಕರೂಪದಲ್ಲಿ ಹೊರತಂದಿದ್ದಾರೆ.
ಇಂಗ್ಲೆಂಡ್‌ನ ಬಿಬಿಸಿ ವಾಹಿನಿಯಲ್ಲಿ ಡ್ಯಾಕ್ಯುಮೆಂಟ್ರಿ ಪ್ರೊಡ್ಯೂಸರ್ ಆಗಿ ನಿವೃತ್ತರಾಗಿರುವ 78 ವರ್ಷದ ಆ್ಯಡಂ ಕಾಫಮ್ ಸಾಕ್ಷ್ಯ ಚಿತ್ರಗಳನ್ನು ಚಿತ್ರೀಕರಿಸಲು ಪ್ರಪಂಚ ಪರ್ಯಟನೆ ಮಾಡಿದವರು. ಈ ಸಂದರ್ಭ ಅವರಿಗೆ ಭಾರತಕ್ಕೂ ಭೇಟಿ ನೀಡುವ ಸಂದರ್ಭ ಹಲವಾರು ಭಾರಿ ಒದಗಿತ್ತು. ಆಗ ಅವರು ಭಾರತೀಯ ಸಂಸ್ಕೃತಿಗೆ ಮಾರುಹೋಗಿದ್ದು, ತಮ್ಮ ನಿವೃತ್ತಿಯ ನಂತರ ಇಲ್ಲಿಯೇ ನೆಲೆಸಲು ಚಿಂತಿಸಿದ್ದರು.
ಮೊದಲಿಗೆ ಅವರು ಕೇರಳ ರಾಜ್ಯದ ಕೊಚ್ಚಿನ್‌ನಲ್ಲಿ ನೆಲೆ ನಿಂತರೂ ಬಳಿಕ ಅದೇಕೋ ಸರಿ ಬರದೆ 2002 ರ ಸುಮಾರಿಗೆ ಮಂಗಳೂರಿನ ಸುರತ್ಕಲ್ ಬಳಿಯ ಹೊಸಬೆಟ್ಟುವಿನಲ್ಲಿ ವಾಸವಾಗಿದ್ದರು. 2012 ರ ವೇಳೆಗೆ ಒಂದು ಬಾರಿ ಮಣಿಪಾಲಕ್ಕೆ ಹೋದಾಗ ಅಲ್ಲಿನ ವಾತಾವರಣ ಇಷ್ಟವಾಗಿ ಈಗ ಅಲ್ಲಿಯೇ ಸಮೀಪದ ಕಟಪಾಡಿ ಬಳಿಯ ಮಣಿಪುರ ಗ್ರಾಮದ ಪಶ್ಚಿಮ ಭಾಗದಲ್ಲಿರುವ ಉದ್ಯಾವರ ಹೊಳೆಯ ಬಳಿಯಲ್ಲಿ ಗುತ್ತಿನ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆ್ಯಡಂ ಕಾಫಮ್, ಮಣಿಪುರ ಗ್ರಾಮಕ್ಕೆ ಬಂದ ನಂತರ ನನಗೆ ಅಲ್ಲಿನ ಗ್ರಾಮಸ್ಥರ ಒಡನಾಟದೊಂದಿಗೆ ತುಳುನಾಡಿನ ಅದ್ಭುತ ಲೋಕದ ಪರಿಚಯವಾಯಿತು. ತುಳುನಾಡಿನ ಸಂಸ್ಕೃತಿಯಲ್ಲಿ ವೈವಿಧ್ಯತೆ ಇದೆ.
ಇಲ್ಲಿನ ವೈವಿಧ್ಯಮಯ ಆಚರಣೆಗಳಾದ ಭೂತದ ಕೋಲ, ನೇಮ, ಯಕ್ಷಗಾನ, ಕಂಬಳ, ಕೋಳಿ ಅಂಕ, ಜಾತ್ರೆ, ಹಬ್ಬ-ಹರಿದಿನಗಳು ನನ್ನನ್ನು ಆಕರ್ಷಿಸಿದವು. ನಮ್ಮಲ್ಲಿ ಬೆರಳೆಣಿಕೆಯಷ್ಟು ಹಬ್ಬವಾದರೆ ಇಲ್ಲಿ ನಿತ್ಯವೂ ಹಬ್ಬ. ಎಲ್ಲವೂ ಅದರದೇ ಆದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಅಲ್ಲದೆ ಇಲ್ಲಿನ ವಿವಿಧ ಜನಾಂಗಗಳು ಅವರದೇ ಆದ ಆಚರಣೆಗಳನ್ನು ಒಳಗೊಂಡಿದ್ದಾರೆ. ವಿವಿಧ ಜನಾಂಗಗಳ ಮದುವೆಗಳಲ್ಲೂ ಅದೆಷ್ಟೋ ವ್ಯತ್ಯಾಸ. ಅಲ್ಲದೆ ಇಲ್ಲಿನ ಕೃಷಿ ಸಂಸ್ಕೃತಿ, ನದಿಯಲ್ಲಿ ಮೀನು ಹಿಡಿಯುವುದು, ತೆಂಗಿನ ಮರವೇರಿ ತೆಂಗಿನಕಾಯಿ ಕೊಯ್ಯುವುದು, ಹಾಲು ಕರೆಯುವುದು, ಡೈರಿಗೆ ಹಾಲುಕೊಡುವುದು ಇವೆಲ್ಲವೂ ನನ್ನೊಳಗೆ ಹೊಸ ಜಗತ್ತನ್ನು ಪರಿಚಯ ಮಾಡಿಸಿತು.
ಇದೆಲ್ಲವನ್ನೂ ನಾನು ಅಕ್ಷರರೂಪಕ್ಕೆ ಇಳಿಸಿದೆ. ಈಗ ಇದು ‘ಎ ವಿಲೇಜ್ ಇನ್ ಸೌತ್ ಇಂಡಿಯಾ’ ಎಂಬ ಶೀರ್ಷಿಕೆಯ ಪುಸ್ತಕ ರೂಪದಲ್ಲಿ ನಮ್ಮ ಮುಂದಿದೆ. ಈ ಪುಸ್ತಕವು ಜ.28 ರಂದು ಇಂಗ್ಲೆಂಡ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಭಾರತದ ಬಗ್ಗೆ ತಿಳಿಯುವುದು ಇನ್ನಷ್ಟು ಇದೆ. ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಮೊಗೆದಷ್ಟು ಹೊಸ ಹೊಸ ವಿಚಾರಗಳು ಕಾಣ ಸಿಗುತ್ತವೆ. ಬುಡಕಟ್ಟು ಜನಾಂಗಗಳ ಬಗ್ಗೆಯೂ ನಾನು ಆಸಕ್ತನಾಗಿದ್ದು, ಅವರ ಬಗ್ಗೆಯೂ ಪುಸ್ತಕ ಹೊರತರುವ ಆಲೋಚನೆಯಲ್ಲಿದ್ದೇನೆ ಎಂದು ಆ್ಯಡಂ ಕಾಫರ್ ಹೇಳುತ್ತಾರೆ.
ಈ ಪುಸ್ತಕಕ್ಕೆ ರೇಖಾಚಿತ್ರಗಳನ್ನು ಬರೆದ ಚಿತ್ರ ಕಲಾವಿದ ದಿನೇಶ್ ಹೊಳ್ಳ ಮಾತನಾಡಿ, ಆ್ಯಡಂರವರು ಜನಪದ ಶೈಲಿಯ ಚಿತ್ರಗಳನ್ನು ಅತಿಯಾಗಿ ಇಷ್ಟಪಡುವವರು. ಮಂಗಳೂರು ವಿವಿಯ ಆವರಣ ಗೋಡೆಗಳಲ್ಲಿ ನಾನು ಹಿಂದೆ ಚಿತ್ರಿಸಿದ ರೇಖಾಚಿತ್ರಗಳನ್ನು ಮೆಚ್ಚಿ ತಮ್ಮನ್ನು ಸಂಪರ್ಕಿಸಿ ಅವರ ಪುಸ್ತಕಕ್ಕೆ ನನ್ನಿಂದಲೇ ರೇಖಾಚಿತ್ರವನ್ನು ಬರೆಸಿದ್ದಾರೆ.
ನಮ್ಮ ಸಂಸ್ಕೃತಿಗಳ ಬಗ್ಗೆ ನಾವೇ ಅಸಡ್ಡೆಯಿಂದ ಇರುವಾಗ, ಪಾಶ್ಚಿಮಾತ್ಯರು ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅದರ ಬಗ್ಗೆ ಅಧ್ಯಯನ ನಡೆಸಿದ್ದಾರೆಂದರೆ ನಮ್ಮ ಸಂಸ್ಕೃತಿಗಳ ಬಗ್ಗೆ ನಾವು ಹೆಮ್ಮೆಪಡಲೇಬೇಕು ಎಂದು ಹೇಳಿದರು.