ನ್ಯೂಯಾರ್ಕ್: ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿರುವ ಒಡಿಸ್ಸಾ ಮೂಲದ ಅಮೆರಿಕ ಬರಹಗಾರ್ತಿ ಗೀತಾ ಮೆಹ್ತಾ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಕೇಂದ್ರ ಸರ್ಕಾರವು ನಾನು ಪ್ರಶಸ್ತಿಗೆ ಅರ್ಹಳು ಎಂದು ಗುರುತಿಸಿರುವುದು ಸಂತೋಶದಾಯಕ ಆದರೆ ಸನಿಹದಲ್ಲೇ ಚುನಾವಣೆ ಇರುವುದರಿಂದ ಈ ಪ್ರಶಸ್ತಿ ಬಗ್ಗೆ ತಪ್ಪಾಗಿ ಅರ್ಥೈಸಬಹುದು ಹಾಗಾಗಿ ನಾನು ಪ್ರಶಸ್ತಿಯನ್ನು ನಿರಾಕರಿಸುತ್ತೇನೆ ಎಂದು ಕಾರಣ ನೀಡಿದ್ದಾರೆ.
ಗೀತಾ ಮೆಹ್ತಾ ಅವರು ಪ್ರಸ್ತುತ ಒಡಿಸ್ಸಾದ ಮುಖ್ಯಮಂತ್ರಿ ಆಗಿರುವ ನವೀನ್ ಪಟ್ನಾಯಕ್ ಅವರ ಸಹೋದರಿ ಮಾಜಿ ಸಿಎಂ ಬಿಜು ಪಟ್ನಾಯಕ್ ಅವರ ಮಗಳು. ಚುನಾವಣೆ ಸನಿಹದಲ್ಲಿರುವ ಕಾರಣ ಮತಗಳಿಗೆ ಬಿಜೆಪಿಯು ಗೀತಾ ಅವರಿಗೆ ಪ್ರಶಸ್ತಿ ನೀಡಿದೆ ಎಂದು ಭಾವಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಗೀತಾ ಮೆಹ್ತಾ ಅವರು ಅಮೆರಿಕದ ನ್ಯೂಯಾರ್ಕ್ ವಾಸಿಯಾಗಿದ್ದು, ಶಿಕ್ಷಣ ಮತ್ತು ಸಾಹಿತ್ಯಕ್ಕೆ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಆಯ್ಕೆ ಮಾಡಲಾಗಿತ್ತು. ಈ ಬಾರಿಯ ಪ್ರಶಸ್ತಿ ಆಯ್ಕೆಯಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿಯನ್ನು ನಿರಾಕರಿಸಲಾಗಿದೆ.
ಒಡಿಸ್ಸಾದಲ್ಲಿ ಬಿಜೆಡಿ ಪಕ್ಷವು ಆಡಳಿತ ನಡೆಸುತ್ತಿದ್ದು, ಗೀತಾ ಮೆಹ್ತಾ ಅವರ ಸಹೋದರ ನವೀನ್ ಪಟ್ನಾಯಕ್ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿ ಪಕ್ಷವು ಈ ಹಿಂದೆ ಎನ್‌ಡಿಎಯ ಮಿತ್ರ ಪಕ್ಷವಾಗಿತ್ತು. ಆದರೆ 2009 ರಲ್ಲಿ ಅದು ಮೈತ್ರಿಯಿಂದ ಹೊರಬಂದಿದೆ ಆದರೆ ಉಪಿಎಯನ್ನಾಗಲಿ ಮಹಾಘಟಬಂಧನ್ ಅನ್ನಾಗಲಿ ಸೇರಿಲ್ಲ, ಆ ಪಕ್ಷವನ್ನು ಮತ್ತೆ ಎನ್‌ಡಿಎ ಒಳಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಸಮಯದಲ್ಲಿ ಸಿಎಂ ತಂಗಿಗೆ ಪದ್ಮಶ್ರೀ ನೀಡಿರುವುದು ಜನರ ಅನುಮಾನಕ್ಕೆ ಕಾರಣ ಆಗುವ ಸಾಧ್ಯತೆ ಇರುವ ಕಾರಣ ಗೀತಾ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.