ಉಡುಪಿ: ಯಕ್ಷಗಾನ -ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ಇದರಲ್ಲಿ ಬರಿಯ ನರ್ತನವಲ್ಲ, ಬರಿಯ ಗಾಯನವಲ್ಲ, ಸಂಭಾಷಣೆ ಭರಿತ ಬರಿಯ ಅಭಿನಯವೂ ಅಲ್ಲ, ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ. ಇಂತಹ ಯಕ್ಷಗಾನಕ್ಕೆ ಮಾರು ಹೋಗದವರು ಯಾರು ಇಲ್ಲ , ಅಂತೇಯೇ ಬಾರ್ಕೂರಿನಲ್ಲಿ ಅಳುಪೋತ್ಸವವನ್ನು ಉದ್ಘಾಟಿಸಲು ಬಂದಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲ ಅವರು ಮಾರ್ಗ ಮಧ್ಯೆಯೇ ಗದ್ದೆಯೊಂದರಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ನೋಡಿ ಆನಂದಪಟ್ಟರು.
ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ‘ಶ್ರೀ ಕೃಷ್ಣಾರ್ಜುನ ಪ್ರಸಂಗ’ ಏರ್ಪಡಿಸಲಾಗಿದ್ದು, ಆಳುಪೋತ್ಸವದ ಉದ್ಘಾಟನೆಯ ನಂತರ ಕೆಲವಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಸಚಿವೆ, ರಾತ್ರಿ ಸುಮಾರು 10 ಘಂಟೆಗೆ ಅಲ್ಲಿಂದ ಹೊರಟಿದ್ದರು.
ಬಾರ್ಕೂರಿನಿಂದ ಬ್ರಹ್ಮಾವರಕ್ಕೆ ಸಾಗುವಾಗ ರಸ್ತೆ ಬದಿಯ ಗದ್ದೆಯಲ್ಲಿ ಯಕ್ಷಗಾನ ನಡೆಯುತ್ತಿರುವುದು ನೋಡಿದ ತಕ್ಷಣ ಸಚಿವರು, ‘ಆಟ ನಡತೊಂದು ಉಂಡು, ಒಂಚೂರು ತೂದ್ ಪೋಯಿ’ ಎಂದು ತನ್ನ ಕಾರನ್ನು ನಿಲ್ಲಿಸಿ ಗದ್ದೆಗಿಳಿದರು ಗ್ರಾಮಸ್ಥರೊಂದಿಗೆ ಕುಳಿತು ಯಕ್ಷಗಾನ ವೀಕ್ಷಿಸಿ ಸಚಿವೆ ಜಯಮಾಲಾ ಸಂಭ್ರಮಿಸಿದ್ದಾರೆ. ಗ್ರಾಮಸ್ಥರು ಕೂಡಾ ಸಚಿವೆಯೊಬ್ಬರು ಸಾಮಾನ್ಯರಂತೆ ತಮ್ಮೊಂದಿಗೆ ಕುಳಿತು ಯಕ್ಷಗಾನ ವೀಕ್ಷಿಸಿದ್ದಕ್ಕೆ ಖುಷಿ ಪಟ್ಟಿದ್ದಾರೆ.