ಬೆಂಗಳೂರು: ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರಾಲಿ ಸರ್ಕಾರ, ಸಚಿವರನ್ನು ಬದಲಿಸಲು ಮಾತ್ರ ಅಲ್ಲ. ಕರ್ನಾಟಕದ ಸಮಗ್ರ ಬದಲಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಎಸ್ ಯಡಿಯೂರಪ್ಪ ಸಾರಥ್ಯದಲ್ಲಿ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಗುರುವಾರ ತುಮಕೂರು ರಸ್ತೆಯಲ್ಲಿ ನಡೆದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರ ಅತೀ ಭ್ರಷ್ಟ ಸರ್ಕಾರವಾಗಿದೆ. ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದೆ. ಕೆರೆಗಳನ್ನು ಬಿಲ್ಡರ್ ಗಳಿಗೆ ಮಾರುವ ಮೂಲಕವೂ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ನೀಡಿದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಗೊತ್ತಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೆರವು ನೀಡುತ್ತಿದೆ. ಅನುದಾನ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ. 1 ಲಕ್ಷ 30 ಸಾವಿರ ಕೋಟಿ ರೂಪಾಯಿ ಹಣ ಎಲ್ಲಿ ಹೋಯ್ತು ಸಿದ್ದರಾಮಯ್ಯಜೀ ಎಂದು ಪ್ರಶ್ನಿಸಿದರು.
960 ಕೋಟಿ ರೂಪಾಯಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೊಟ್ಟಿದ್ದೇವೆ. 4563 ಕೋಟಿ ರೂಪಾಯಿ ಅಮೃತ ಯೋಜನೆಗೆ ಕೊಟ್ಟಿದ್ದೇವೆ, ರೈಲ್ವೆ ಯೋಜನೆಗೆ 2197 ಕೋಟಿ ರೂಪಾಯಿ, 39000 ಕೋಟಿ ಮುದ್ರಾ ಯೋಜನೆಗೆ ಕೊಟ್ಟಿದ್ದೇವೆ.
ಸಿದ್ದರಾಮಯ್ಯನವರಿಗೆ ನವೆಂಬರ್ 1 ಕನ್ನಡ ರಾಜ್ಯೋತ್ಸವ ಮಾಡುವ ಬಗ್ಗೆ ಉತ್ಸಾಹವಿಲ್ಲ, ಆದರೆ ನವೆಂಬರ್ 10ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ನೆರವೇರಿಸಲು ಅತ್ಯುತ್ಸಾಹ ತೋರುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ 19 ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಿದೆ. ದೇಶದ ರಕ್ಷಣೆ, ರಾಜ್ಯದ ಸುರಕ್ಷತೆ ಬಗ್ಗೆ ಸಿದ್ದರಾಮಯ್ಯನವರಿಗೆ ಕಾಳಜಿ ಇಲ್ಲ ಎಂದರು.
ಅಮಿತ್ ಶಾ ಅವರು ಆಗಮಿಸಿದ್ದಾಗ ಮೈಸೂರು ಪೇಟಾ ತೊಡಿಸಿ ಬರಮಾಡಿಕೊಳ್ಳಲಾಯಿತು. ಭಾಷಣದ ಆರಂಭದಲ್ಲೇ ಭಾವಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಂದು ಉಲ್ಲೇಖಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಹಸಿರು ಶಾಲು ಹೊದಿಸಿ ಶಾ ಅವರು ಸನ್ಮಾನಿಸಿ ಎತ್ತಿನಬಂಡಿಯ ಸ್ಮರಣಿಕೆಯನ್ನು ನೀಡಿದರು.