Thursday, January 23, 2025
ಸುದ್ದಿ

ವಿವೇಕಾನಂದದಲ್ಲಿ ರಾಜ್ಯಮಟ್ಟದ ‘ಐಟಿ ಫೆಸ್ಟ್ ಟೆಕ್ನೋ ತರಂಗ್-19’ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ನಾವಿಂದು ಮಾನವ ಇತಿಹಾಸದ ಅತ್ಯುತ್ಕೃಷ್ಟ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಕಳೆದ ಹತ್ತು ವರ್ಷಗಳ ಹಿಂದೆ ಇಲ್ಲದಿದ್ದ ಮೊಬೈಲ್‌ನಂತಹ ಆಧುನಿಕ ವ್ಯವಸ್ಥೆಗಳು ಇಂದು ನಮ್ಮ ಬದುಕಿನ ಭಾಗವಾಗಿವೆ. ಸ್ಪಷ್ಟವಾದ ಕನಸನ್ನು ಹೊಂದಿದ ಪ್ರತಿಯೊಬ್ಬರಿಗೂ ಅಗಾಧವಾದದ್ದನ್ನು ಸಾಧಿಸುವ ಸಾಧ್ಯತೆ ಇಂದಿನ ದಿನಗಳಲ್ಲಿ ಅನಾವರಣಗೊಂಡಿದೆ ಎಂದು ಬೆಂಗಳೂರಿನ ಈಸಿಲಿಬ್ ಸಾಪ್ಟ್ವೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ವಾಸು ಎಂ ದೇಶಪಾಂಡೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಐಟಿ ಕ್ಲಬ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಐಟಿ ಸ್ಪರ್ಧೆ ‘ಟೆಕ್ನೋ ತರಂಗ್ – 19’ ಅನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಕ್ರೋಸಾಪ್ಟ್, ಎಚ್‌ಪಿಯಂತಹ ಕಂಪೆನಿಗಳೆಲ್ಲವೂ ಯುವಕರ ಹೊಸ ಆಲೋಚನೆಗಳಿಂದ ಹುಟ್ಟಿಕೊಂಡಂತಹವುಗಳು. ಆದರೆ ಇಂದು ಅಸಂಖ್ಯ ಕೋಟಿ ವ್ಯವಹಾರಗಳ ತಾಣವಾಗಿವೆ. ಪ್ರತಿಯೊಬ್ಬನಲ್ಲೂ ಹೊಸ ಹೊಸ ಆಲೋಚನೆಗಳು, ಚಿಂತನೆಗಳು, ಕನಸುಗಳಿವೆ. ಅವುಗಳನ್ನು ಸಾಕಾರಗೊಳಿಸುವುದಕ್ಕೆ ಪ್ರಯತ್ನಿಸಬೇಕು. ಇಂದು ಕಿರಿದಾಗಿ ಆರಂಭಗೊಂಡದ್ದು ನಾಳೆ ಬೃಹತ್ತಾಗಿ ಬೆಳೆಯಬಹುದು. ಸಕಾರಾತ್ಮಕ ಚಿಂತನೆ ನಮ್ಮನ್ನು ಎತ್ತರಕ್ಕೊಯ್ಯಬಹುದು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ನಾವು ಬಳಸುವ ಮೊಬೈಲ್‌ನಲ್ಲಿರುವ ವಿವಿಧ ಆ್ಯಪ್‌ಗಳನ್ನು ಗಮನಿಸಬೇಕು. ಅಂತೆಯೇ ಆ ಆ್ಯಪ್‌ಗಳನ್ನು ಯಾರು ರೂಪಿಸಿದ್ದಾರೆ ಎಂಬುದನ್ನೂ ಅಧ್ಯಯನ ನಡೆಸಬೇಕು. ಅನೇಕ ಹೊಸ ವಿಷಯಗಳನ್ನು ರೂಪಿಸಿದವರು ಅತ್ಯಂತ ಸಣ್ಣ ವಯಸ್ಸಿನವರೇ ಆಗಿರುತ್ತಾರೆ ಎಂದರಲ್ಲದೆ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಸೆಮಿನಾರ್.

ಕಾರ್ಯಾಗಾರಗಳಲ್ಲಿ ಭಾಗಿಗಳಾಗಬೇಕು. ಆಗ ಮಾತ್ರ ನಮ್ಮ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ ಮಾತನಾಡಿ ಇಂದಿನ ಅನೇಕ ತಂತ್ರಜ್ಞಾನಗಳು ನಮ್ಮಲ್ಲಿ ವಿಸ್ಮಯ ಮೂಡಿಸುತ್ತದೆ. ಮನೆಯಲ್ಲಿ ಕುಳಿತೇ ಪ್ರಪಂಚದ ನಾನಾ ಸಂಗತಿಗಳನ್ನು ಕಾಣುವ ಅವಕಾಶ ಪ್ರಾಪ್ತವಾಗಿದೆ. ಈಗಿನ ಕಾಲದ ಕೃತಕ ಬುದ್ಧಿಮತ್ತೆ ಅನೇಕ ಅಸಾಧ್ಯವೆನಿಸಿದ್ದ ವಿಚಾರಗಳನ್ನು ಸುಲಭ ಸಾಧ್ಯವನ್ನಾಗಿಸಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಮನುಷ್ಯನ ಅತ್ಯಂತ ಶ್ರೇಷ್ಟ ಸಂಪತ್ತೆಂದರೆ ಅದು ಬುದ್ಧಿವಂತಿಕೆ. ಅದನ್ನು ಬಳಸಿಕೊಂಡು ಅಗಾಧವಾದದ್ದನ್ನು ಸಾಧಿಸುವುದಕ್ಕೆ ಸಾಧ್ಯ. ಯಾರು ಕಠಿಣ ಹಾದಿಯಲ್ಲಿ ಸಾಗುತ್ತಾರೋ ಅಂತಹವರು ಇತಿಹಾಸ ನಿರ್ಮಿಸಬಲ್ಲರು. ಅಂತಹವರು ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ವೈಜ್ಞಾನಿಕ ಅಭಿವೃದ್ಧಿ ಇಂದಿನ ಸಮಾಜದ ತುರ್ತು ಎಂದು ಹೇಳಿದರು.

ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ, ಐಟಿ ಕ್ಲಬ್ ಸಂಯೋಜಕರಲ್ಲೊಬ್ಬರಾದ ಶ್ವೇತಲಕ್ಷಿ್ಮ, ಕ್ಲಬ್ ಅಧ್ಯಕ್ಷ ಅಭಿಜಿತ್ ಸಫಲ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮಾನಸ ಹಾಗೂ ಶ್ರೀದೇವಿ ಪ್ರಾರ್ಥಿಸಿದರು. ಐಟಿ ಕ್ಲಬ್ ಸಂಯೋಜಕ ಗುರುಕಿರಣ್ ಸ್ವಾಗತಿಸಿದರು. ವಿದ್ಯಾರ್ಥಿ ಭಜನ್ ಅಕ್ಷಯ ವಂದಿಸಿದರು. ವಿದ್ಯಾರ್ಥಿನಿಯರಾದ ನೀಮಾ ಎಚ್ ಹಾಗೂ ಜೋನಿಟಾ ಶರಲ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.