ಸುಮನ್ ಕುಮಾರಿ ಬೊದಾನಿ ಅವರು ಪಾಕಿಸ್ಥಾನದ ಮೊತ್ತ ಮೊದಲ ಹಿಂದು ನ್ಯಾಯಾಧೀಶೆಯಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ಥಾನದ ಕಂಬರ್ – ಶಹದಾಕೋಟ್‌ನ ನಿವಾಸಿಯಾಗಿರುವ ಸುಮನ್ ಅವರು ತಮ್ಮ ಹುಟ್ಟೂರ ಜಿಲ್ಲೆಯಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲಿದ್ದಾರೆ.
ಸುಮನ್ ಅವರು ತಮ್ಮ ಕಾನೂನು ಪದವಿ ಶಿಕ್ಷಣವನ್ನು ಪಾಕಿಸ್ಥಾನದ ಹೈದರಾಬಾದ್ ನಲ್ಲಿ ಪೂರೈಸಿ ಕರಾಚಿ ಸ್ಯಾಬಿಸ್ಟ್ ಯುನಿವರ್ಸಿಟಿಯಿಂದ ಕಾನೂನು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಪವನ್ ಕುಮಾರ್ ಬೊದಾನಿ ಹೇಳುವ ಪ್ರಕಾರ ಅವರ ಮಗಳು “ಸುಮನ್ ಗೆ ಹುಟ್ಟೂರ ಜಿಲ್ಲೆಯಲ್ಲಿನ ಬಡವರಿಗೆ ಉಚಿತ ಕಾನೂನು ನೆರವು ನೀಡುವಾಸೆ ಇದೆ. ಆಕೆ ತುಂಬಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಹಾಗಿದ್ದರೂ ತನ್ನ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಆಕೆ ತನ್ನ ಸೇವಾ ಕ್ಷೇತ್ರದಲ್ಲಿ ಹೊಸ ಹೊಸ ಎತ್ತರಗಳನ್ನು ಕಾಣುವ ವಿಶ್ವಾಸವಿದೆ’.
ಸುಮನ್ ಅವರ ತಂದೆ ಓರ್ವ ನೇತ್ರ ತಜ್ಞ; ಹಿರಿಯ ಸಹೋದರಿ ಸಾಫ್ಟ್ ವೇರ್ ಇಂಜಿನಿಯರ್; ಮತ್ತೋರ್ವ ಸಹೋದರಿ ಚಾರ್ಟರ್ಡ್ ಅಕೌಂಟೆಂಟ್. ಅಂದ ಹಾಗೆ ಸುಮನ್, ಭಾರತೀಯ ಚಿತ್ರರಂಗದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಮತ್ತು ಆತಿಫ್ ಅಸ್ಲಾಂ ಅವರ ಫ್ಯಾನ್.
ಪಾಕಿಸ್ಥಾನದ ಹಿಂದು ಸಮುದಾಯದ ಮೊತ್ತ ಮೊದಲ ನ್ಯಾಯಾಧೀಶರಾಗಿರುವ ರಾಣಾ ಭಗವಾನ್‌ದಾಸ್ ಅವರು 2005ರಿಂದ 2007ರ ವರೆಗಿನ ಅವಧಿಯಲ್ಲಿ ಪಾಕಿಸ್ಥಾನದ ಚೀಫ್ ಜಸ್ಟಿಸ್ ಆಗಿ ಸೇವೆ ಸಲ್ಲಿಸಿದ್ದಾರೆ.
ಪಾಕಿಸ್ಥಾನದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಗಳು ಕೇವಲ ಶೇ.2ರಷ್ಟು ಇದ್ದಾರೆ. ಅಂತೆಯೇ ಪಾಕಿಸ್ಥಾನದಲ್ಲಿ ಇಸ್ಲಾಂ ಬಳಿಕದ ಅತೀ ದೊಡ್ಡ ಧರ್ಮವೇ ಹಿಂದು ಧರ್ಮವಾಗಿದೆ.