Thursday, January 23, 2025
ಸುದ್ದಿ

ಪ್ರತಿಫಲ ಬಯಸದೇ ಮಾಡುವುದೇ ಸಮಾಜಸೇವೆ: ಸುರೇಶ್ ಶ್ರೀಶಾಂತಿ – ಕಹಳೆ ನ್ಯೂಸ್

ಪುತ್ತೂರು: ಪ್ರತಿಫಲ ಬಯಸದೇ ಮಾಡುವುದೇ ಸಮಾಜಸೇವೆ. ಪರರಿಗೆ ಒಳಿತು ಮಾಡಬೇಕೆಂಬ ಯೋಚನೆ ಮೊದಲು ನಮ್ಮ ಮನದೊಳಗೆ ಮೂಡಬೇಕು. ಕಷ್ಟದಲ್ಲಿರುವವರಿಗೆ ನಾವು ಮಾಡುವ ಅಳಿಲು ಸೇವೆ ಅವರ ಬಾಳಿನಲ್ಲಿ ಬೆಳಕಾಗಬಹುದು. ಆ ಬೆಳಕು ನಮ್ಮ ಜೀವನಕ್ಕೂ ಪಸರಿಸುತ್ತದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಇಲ್ಲಿನ ಮಾಸ್ಟರ್ ಪ್ಲಾನರಿಯ ಉದ್ಯೋಗಿ, ಗ್ರಾಫಿಕ್ ಡಿಸೈನರ್, ರಾಜ್ಯ ಯುವಜನ ಮೇಳದ ‘ಯುವ ಪ್ರಶಸ್ತಿ’ ವಿಜೇತ ಸುರೇಶ್ ಶ್ರೀಶಾಂತಿ ಕಬಕ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ ‘ಜನ-ಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನೊಬ್ಬನಿಂದ ಎಲ್ಲವೂ ಸಾಧ್ಯವಾಗುತ್ತದೆ ಎಂಬುವುದು ವ್ಯಕ್ತಿಯ ಅತಿದೊಡ್ಡ ತಪ್ಪು ಕಲ್ಪನೆ. ಸಾಂಘಿಕ ಪ್ರಯತ್ನವಿದ್ದಾಗ ಕೈಗೊಂಡ ಕಾರ್ಯ ಯಶಸ್ಸನ್ನು ಕಾಣುತ್ತದೆ. ಮೇಲ್ನೋಟಕ್ಕೆ ಒಬ್ಬನೇ ಸಾಧಕನಾಗಿ ಕಂಡು ಬಂದರೂ ಅವನ ಸಾಧನೆಗಾಗಿ ಹಿನ್ನಲೆಯಲ್ಲಿ ಶ್ರಮಿಸಿದ ಕೈಗಳು ಅನೇಕ. ಸಮಾಜದ ಹೊಸತನವನ್ನು ತರುವ ಪ್ರಯತ್ನದಲ್ಲಿ ಭಾಗವಹಿಸಿದ ಗುಂಪಿನ ನಾಯಕತ್ವವನ್ನು ಅವನು ವಹಿಸಿರುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ವೃತ್ತಿ ಅಥವಾ ಪ್ರವೃತ್ತಿಯಲ್ಲಿ ಬೆಳೆಯಬೇಕಾದರೆ ಮೊದಲಾಗಿ ಆಸಕ್ತಿ ಇರಬೇಕು. ಸಮಯದ ನಿರ್ವಹಣೆ ಕಷ್ಟವೆನಿಸುವುದು ಸಹಜ. ಅದರೆ ಅಂದುಕೊಂಡದನ್ನು ಸಾಧಿಸುವ ಛಲ ನಮ್ಮೊಂದಿಗಿದ್ದರೆ ಎದುರಾಗುವ ಕಷ್ಟಗಳು ನೀರಿನಂತೆ ಕರಗಿ ಹೋಗುತ್ತವೆ. ವಿನಯ, ಸರಳತೆ ಆಭರಣವಾಗಿದ್ದಾಗ ಸಮಾಜಕ್ಕೆ ಇನ್ನಷ್ಟು ಹತ್ತಿರವಾಗಲು ಸಾಧ್ಯ ಎಂದು ನುಡಿದರು.

ಸ್ವಾಗತಿಸಿ ಪ್ರಸ್ತಾವನೆಗೈದು ಮಾತನಾಡಿದ ಕಾರ್ಯಕ್ರಮದ ಸಂಯೋಜಕಿ, ವಿಭಾಗದ ಉಪನ್ಯಾಸಕಿ ಪ್ರಜ್ಞಾ ಬಾರ್ಯ, ಪತ್ರಿಕೋದ್ಯಮ ವೃತ್ತಿಗೆ ಯಾವುದೇ ವಿಷಯದ ಕುರಿತ ಮಾಹಿತಿ ಬೇಡವೆಂದಿಲ್ಲ. ಜನ-ಮನ ಕಾರ್ಯಕ್ರಮದ ಮೂಲ ಉದ್ದೇಶ ವಿವಿಧ ರಂಗಗಳಲ್ಲಿ ವೃತ್ತಿ-ಪ್ರವೃತ್ತಿಯನ್ನು ಕಂಡು ಕೊಂಡ ಜನರ ಅನುಭವದ ಮಾತುಗಳಿಗೆ ಕಿವಿಯಾಗುವುದು.

ಜೀವನದಲ್ಲಿ ಎಂದಿಗೂ ಅನುಭವವೆಂಬುವುದು ಒಂದು ಪಾಠಶಾಲೆ. ಜೀವನದಲ್ಲಿ ಹಲವು ಏರು-ಪೇರುಗಳನ್ನು ಎದುರಿಸಿ, ಕಷ್ಟಗಳನ್ನು ಸಮರ್ಥವಾಗಿ ಮೀರಿ ನಿಂತ ವ್ಯಕ್ತಿಗಳು ಎಂದೆಂದಿಗೂ ಮಾದರಿ. ಅವರ ಜೀವನಗಾಥೆಗಳು ಅರ್ಥಪೂರ್ಣವಾದ ಹೊತ್ತಗೆಗಳು ಎಂದರು.

ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕಿಯರಾದ ಸುಶ್ಮಿತಾ ಜಯಾನಂದ್ ಹಾಗೂ ರಾಧಿಕಾ ಕಾನತ್ತಡ್ಕ ಉಪಸ್ಥಿತರಿದ್ದರು. ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿನಿ ಸೀಮಾ ಪೋನಡ್ಕ ಕಾರ್ಯಕ್ರಮ ನಿರೂಪಿಸಿದರು.