ನವದೆಹಲಿ: ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರಣಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗೆ ನಿಷೇಧ ಹೇರುವ ಸಾಧ್ಯತೆಯಿದೆ. ಉಗ್ರರ ಕ್ಯಾಂಪ್‌ಗ್ಳು ಮತ್ತು ಬಾಂಬ್ ತಯಾರಿಕೆ ಸೇರಿದಂತೆ ಭಯೋತ್ಪಾದಕ ಕೃತ್ಯಗಳಲ್ಲಿ ಸಂಘಟನೆ ತೊಡಗಿಸಿಕೊಂಡಿದ್ದು, ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ ಅಡಿಯಲ್ಲಿ ನಿಷೇಧ ಹೇರಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ವರದಿ ನೀಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆದರೆ ಎನ್‌ಐಎ ವರದಿಯಲ್ಲಿನ ಆರೋಪಗಳನ್ನು ಪಿಎಫ್ಐ ತಳ್ಳಿಹಾಕಿದೆ. ಈ ಮಧ್ಯೆ ಸಂಘಟನೆಯ ಮೇಲಿನ ಆರೋಪ ಸಾಬೀತಾಗುವವರೆಗೂ ಯಾವುದೇ ಪ್ರತಿಕ್ರಿಯೆ ನೀಡಲಾಗದು ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಉಪನ್ಯಾಸಕರ ಕೈ ಕತ್ತರಿಸಿದ್ದು, ಕಣ್ಣೂರಿನಲ್ಲಿ ತರಬೇತಿ ಕ್ಯಾಂಪ್ ಆಯೋಜಿಸಿರುವುದೇ ಪಿಎಫ್ಐ ಎಂದು ಎನ್‌ಐಎ ವರದಿಯಲ್ಲಿ ಹೇಳಿದೆ. ಕಣ್ಣೂರಿನಲ್ಲಿ ನಡೆಸಿದ ಕ್ಯಾಂಪ್ ಸ್ಥಳದಲ್ಲಿ ಕತ್ತಿ, ದೇಸಿ ಬಾಂಬ್‌ಗಳು ಮತ್ತು ಐಇಡಿ ತಯಾರಿಕೆ ಸಾಮಗ್ರಿಗಳನ್ನು ಎನ್‌ಐಎ ವಶಪಡಿಸಿಕೊಂಡಿತ್ತು. ಅಲ್ಲದೆ, ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಹತ್ಯೆಯನ್ನೂ ಎನ್‌ಐಎ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇಸ್ಲಾಮಿಕ್ ಸ್ಟೇಟ್ ಅಲ್ ಹಿಂದಿ ಎಂಬ ಹೆಸರಿನಲ್ಲಿ ದಕ್ಷಿಣ ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಲು ಪಿಎಫ್ಐ ಯೋಜಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಸ್ತೃತ ತನಿಖೆ ನಡೆಸಿದ ನಂತರ ಎನ್‌ಐಎ ವರದಿಯನ್ನು ತಯಾರಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಿಎಫ್ಐ ನಿರಾಕರಣೆ:
ಎನ್‌ಐಎ ಆರೋಪವನ್ನು ಪಿಎಫ್ಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೋಯಾ ನಿರಾಕರಿಸಿದ್ದು, ಸಂಸ್ಥೆಯ ಚಟುವಟಿಕೆಯ ಬಗ್ಗೆ ತಿಳಿಯಲು ಎನ್‌ಐಎ ಎಂದೂ ನಮ್ಮನ್ನು ಸಂಪರ್ಕಿಸಿಲ್ಲ. ಪಿಎಫ್ಐ ಚಟುವಟಿಕೆ ರಾಷ್ಟ್ರವಿರೋಧಿಯಲ್ಲ. ಅದು ರಾಷ್ಟ್ರದ ಪರವಾಗಿದೆ. ನಾವು ಯಾವುದೇ ಉಗ್ರ ಕ್ಯಾಂಪ್‌ಗ್ಳನ್ನು ನಡೆಸಿಲ್ಲ ಮತ್ತು ಉಗ್ರ ಕೃತ್ಯದಲ್ಲಿ ತೊಡಗಿಸಿಕೊಂಡಿಲ್ಲ. ನಮ್ಮನ್ನು ಉಗ್ರ ಸಂಘಟನೆ ಎಂದು ಕರೆಯುವುದಕ್ಕೆ ಯಾವುದೇ ಸೂಕ್ತ ಕಾರಣವಿಲ್ಲ ಎಂದಿದ್ದಾರೆ.
ಐಸಿಸ್ ಸೇರಿದ 6 ಪಿಎಫ್ಐ ಕಾರ್ಯಕರ್ತರು:
ಪಿಎಫ್ಐ ಚಟುವಟಿಕೆಯ ಬಗ್ಗೆ ಇಂಡಿಯಾ ಟುಡೇ ಸುದ್ದಿ ಸಂಸ್ಥೆ ಕುಟುಕು ಕಾರ್ಯಾಚರಣೆ ನಡೆಸಿದ್ದು, ಅಕ್ರಮ ಹಣಕಾಸು ಪೂರೈಕೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ ಮತ್ತು ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಎಂಬುದಾಗಿ ಪರಿವರ್ತಿಸುವ ಗುರಿಯನ್ನು ಸಂಘಟನೆ ಹೊಂದಿದೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಕಾರ್ಯಕರ್ತರೇ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಣ್ಣೂರಿನ ಆರು ಪಿಎಫ್ಐ ಕಾರ್ಯಕರ್ತರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿರುವುದಾಗಿ ಕೇರಳ ಪೊಲೀಸರು ಗುರುತಿಸಿದ್ದಾರೆ. ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ಇವರು ಸಿರಿಯಾ ಅಥವಾ ಇತರ ದೇಶಗಳಿಗೆ ಪರಾರಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಬ್ದುಲ್ ಗಯೂಮ್, ಅಬ್ದುಲ್ ಮನಾಫ್, ಶಬೀರ್, ಸುಹೈಲ್ ಹಾಗೂ ಆತನ ಪತ್ನಿ ರಿಜ್ವಾನಾ, ಸಫಾÌನ್ ಎಂಬುದಾಗಿ ಇವರನ್ನು ಗುರುತಿಸಲಾಗಿದೆ.