ನಕಲಿ ಇಮೇಲ್ ಹಾಗೂ ಫೋನ್ ನಂಬರ್ ಬಳಸಿಕೊಂಡು ಅಮೆಜಾನ್ ನಲ್ಲಿ ಖಾತೆ ತೆರೆದು ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಇಂದೋರ್ ನಲ್ಲಿ ನಡೆದಿದ್ದು, ಆರೋಪಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೊಹಮ್ಮದ್, ಅಮೆಜಾನ್ ನಲ್ಲಿ ಈವರೆಗೆ 30 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ತರಿಸಿಕೊಂಡು, ಬಳಿಕ ವಸ್ತು ಬಂದೇ ಇಲ್ಲವೆಂದು ಅಮೆಜಾನ್ ನಿಂದ ಹಣ ವಾಪಾಸು ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಮೆಜಾನ್ ಸೈಬರ್ ದೂರು ದಾಖಲಿಸಿದ್ದರಿಂದ ಆರೋಪಿಗಳನ್ನು ಹಿಡಿಯಲಾಗಿದೆ. ಪ್ರಮುಖ ಆರೋಪಿ 27 ವರ್ಷದ ಮೊಹಮ್ಮದ್ ಮಹುವಾಲ ಎನ್ನುವವನನ್ನು ಬಂಧಿಸಿದ್ದು, ಸದ್ಯ ಸ್ಥಳೀಯ ಅಮೆಜಾನ್ ಗೋದಾಮಿನ ಸಿಬ್ಬಂದಿಗಳು ಈ ಪ್ರಕರಣದಲ್ಲಿ ಶಾಮೀಲಾಗಿರುವ ಸಾಧ್ಯತೆಯಿದೆ ಎನ್ನುವ ಶಂಕೆಯನ್ನು ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಬ್ರಾಂಡ್ ಮೊಬೈಲ್ ಸೇರಿದಂತೆ ಗ್ಯಾಜೆಟ್ ಗಳನ್ನು ಆನ್ ಲೈನ್ ಆರ್ಡರ್ ಮಾಡಿ, ಕೊರಿಯರ್ ಸಿಬ್ಬಂದಿಯ ಸಹಾಯದೊಂದಿಗೆ, ಅಮೆಜಾನ್ ಬಾಕ್ಸ್ ನಲ್ಲಿ ಏನು ಇಲ್ಲವೆಂದು ನಂಬಿಸುತ್ತಿದ್ದ ಮೊಹಮ್ಮದ್ ಅಮೆಜಾನ್‌ನಿಂದ ಹಣ ವಾಪಾಸು ಪಡೆದು, ಸ್ಥಳೀಯ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಈ ಫೋನ್ ಗಳನ್ನು ಮಾರಾಟ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಇದೀಗ ಬಂಧಿತನಿಂದ ಎರಡು ಫೋನ್, ವೈಫೈ ರೂಟರ್, ಹೆಡ್ ಫೋನ್ ಸೇರಿದಂತೆ ಕೆಲ ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.