Friday, September 20, 2024
ಸುದ್ದಿ

ಡ್ರಾಪ್ ಅಂತಾ ಯಾರಾದ್ರು ಕಾರು ಹತ್ತು ಅಂತಾ ಕೇಳಿದ್ರೆ ಜೋಕೆ… ಯಾಕಂದ್ರೆ!? – ಕಹಳೆ ನ್ಯೂಸ್

ಚೆನ್ನೈನ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು ಮೂಲದ ಟೆಕ್ಕಿಯನ್ನು ಅಪಹರಿಸಿ ಆಯುಧಗಳಿಂದ ಹೊಡೆದು 45 ಸಾವಿರ ರೂ. ಕಸಿದು ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

25 ವರ್ಷದ ಅನುರಾಗ್ ಶರ್ಮಾ ಎಂಬಾತ ಅಪಹರಣಕ್ಕೆ ಒಳಗಾದ ಟೆಕ್ಕಿ. ನಗರದ ಜಾಲಹಳ್ಳಿ ಮೂಲದವರಾಗಿದ್ದು, ಚೆನ್ನೈನ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ಕಾರ್ಯದ ನಿಮಿತ್ತ ಡಿ. 26 ರಂದು ಬೆಂಗಳೂರಿಗೆ ಬಂದಿದ್ದರು. ಬಳಿಕ ಮತ್ತೆ ಚೆನ್ನೈಗೆ ಹೊರಡಲು ಡಿ. 31 ರಂದು ಬಸ್ ಬುಕ್ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಗದಿತ ವೇಳೆ ಟೆಕ್ಕಿ ತಲುಪದ ಪರಿಣಾಮ ಬಸ್ ಮಿಸ್ ಮಾಡಿಕೊಂಡಿದ್ದಾರೆ. ಮಧ್ಯರಾತ್ರಿ 1 ಗಂಟೆ ವೇಳೆ ಬೇರೊಂದು ಬಸ್‌ಗಾಗಿ ಕಾಯುತ್ತಿದ್ದಾಗ ಬಿಳಿ ಬಣ್ಣದ ಕಾರಿನಲ್ಲಿ ಅಪಹರಣಕಾರರು ಬಂದು ಪ್ರಯಾಣಿಕರ ಸೋಗಿನಲ್ಲಿ ಟೆಕ್ಕಿಯನ್ನು ಕಾರ್ ಹತ್ತಿಸಿಕೊಂಡಿದ್ದಾರೆ.

ಜಾಹೀರಾತು

ಕೊಂಚ ದೂರ ಹೋದ ಬಳಿಕ ಇದಕ್ಕಿಂದ್ದಂತೆ ಅಪಹರಣಕಾರರು ಮುಖಕ್ಕೆ ಗುದ್ದಿ, ಬಲವಾದ ಆಯುಧದಿಂದ ಹೊಡೆದಿದ್ದಾರೆ. ಇಬ್ಬರು ಪರ್ಸ್ ಹಾಗೂ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ನೀಡದಿದ್ದಾಗ ಬಲವಂತವಾಗಿ ಜೇಬಿನಲ್ಲಿದ್ದ 2 ಸಾವಿರ ರೂ. ನಗದು, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಕಸಿದುಕೊಂಡಿದ್ದಾರೆ. ಬಳಿಕ ಹಳೆ ಬಟ್ಟೆಯಿಂದ ಕಾಲನ್ನು ಕಟ್ಟಿ ಎಟಿಎಂ ಕಾರ್ಡ್ಗಳ ಪಿನ್ ನಂಬರ್ ಹೇಳುವಂತೆ ಒತ್ತಾಯಿಸಿದ್ದಾರೆ.

ಇದಕ್ಕೆ ಒಪ್ಪದಿದಾಗ ಹರಿತವಾದ ಆಯುಧದಿಂದ ಹೊಡೆದು ಸಾಯಿಸುವುದಾಗಿ ಬೆದರಿಸಿ ಅವರಿಂದ ಪಿನ್ ನಂಬರ್ ಪಡೆದು 45 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿ ಚಂದಾಪುರದ ನಿರ್ಜನ ಪ್ರದೇಶಕ್ಕೆ ಎಸೆದು ಪರಾರಿಯಾಗಿದ್ದಾರೆ.

ಸ್ಥಳೀಯರ ನೆರವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಕೃತ್ಯದಲ್ಲಿ ಉಮೇಶ್ ಹಾಗೂ ರಾಹುಲ್ ಎಂಬುವರು ಭಾಗಿಯಾಗಿರುವುದು ಕಂಡುಬಂದಿದ್ದು, ಒಂದೆರಡು ದಿನಗಳಲ್ಲಿ ಪತ್ತೆ ಮಾಡುವುದಾಗಿ ತಿಳಿಸಿದ್ದಾರೆ.