ಪುತ್ತೂರು: ಬರವಣಿಗೆ ಎನ್ನುವುದು ಸೃಜನಶೀಲ ಕೌಶಲ್ಯ. ಈ ಕೌಶಲ್ಯವನ್ನು ರೂಢಿಸಿಕೊಳ್ಳುವುದಕ್ಕೆ ಸರಿಯಾದ ಅಡಿಪಾಯ ವಿದ್ಯಾರ್ಥಿ ಹಂತದಲ್ಲಿ ಸಿಗಬೇಕು. ನಮ್ಮಲ್ಲಿ ಆಸಕ್ತಿ ಇದ್ದರೆ ಯಾವ ಕೌಶಲ್ಯವನ್ನು ಬೇಕಾದರು ರೂಡಿಸಿಕೊಳ್ಳುವ ಸಾಮಾರ್ಥ್ಯ ನಮಗೆ ಲಭಿಸುತ್ತದೆ ಎಂದು ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಹರಿಪ್ರಸಾದ್ ನಾಡಿಗ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜನೆಗೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಕಲಿಯುವುದಕ್ಕೆ ಹಲವಾರು ಅವಕಾಶಗಳಿವೆ. ಆದ್ದರಿಂದ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಸಮರ್ಥವಾಗಿ ಬೆಳೆಸಿಕೊಳ್ಳಬೇಕು. ಕಲಿತ ನಂತರ ಇನ್ನೊಬ್ಬರಿಗೆ ಆ ಮಾಹಿತಿಯನ್ನು ಅರ್ಥವಾಗುವ ಹಾಗೆ ತಿಳಿಸಬೇಕು.
ನಮ್ಮ ಸುತ್ತಮುತ್ತಲು ನಡೆಯುವ ಸಂಗತಿಗಳನ್ನು ವಿರ್ಮಶಿಸುವ ಗುಣ ನಮ್ಮಲ್ಲಿರಬೇಕು. ಯೋಚಿಸಿ ಮಾತಾನಾಡುವುದನ್ನು ಬೆಳೆಸಿಕೊಳ್ಳಬೇಕು. ಸಮರ್ಥ ಜೀವನವನ್ನು ಸಾಗಿಸಲು ಆತ್ಮ ವಿಶ್ವಾಸವನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಗಾರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್.ಎಚ್.ಜಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ಲಾಲು ಕಾರ್ಯಕ್ರಮವನ್ನು ನಿರ್ವಹಿಸಿದರು.