ಪುತ್ತೂರು: ಸಮಾಜದ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ಬಹಳ ದೊಡ್ಡದು. ಅವರು ಬರೆಯುವ ಒಂದು ಸಣ್ಣ ವರದಿ ಕೂಡ ಬಹಳ ಮುಖ್ಯವೆನಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯ ಬದುಕನ್ನೇ ಬದಲಾಯಿಸಿ ಬಿಡುವ ಸಾಮಥ್ರ್ಯ ಒಂದು ಬರಹಕ್ಕಿದೆ. ಯಾವುದೇ ಒಂದು ಮಾಹಿತಿಯನ್ನು ವರದಿಯಾಗಿ ಮಾಡುವ ಮುನ್ನ ಅದು ನಿಜವೇ ಅಲ್ಲವೇ ಎನ್ನುವುದನ್ನು ಪರಿಶೀಲಿಸುವುದು ಮುಖ್ಯವಾಗುತ್ತದೆ ಎಂದು ಹೊಸದಿಗಂತ ಪತ್ರಿಕೆಯ ಪುತ್ತೂರಿನ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಪ್ರಸ್ತುತ ನಮ್ಮ ಬರಹಗಳನ್ನು ಪ್ರಕಟಿಸಲು ನಮಗೆ ಹೇರಳವಾದ ಅವಕಾಶಗಳಿವೆ. ಸಾಮಾಜಿಕ ಜಾಲತಾಣಗಳು ನಮ್ಮ ಕೆಲಸಗಳನ್ನು ಅಧಿಕ ಜನರಿಗೆ ತಲುಪುವಂತೆ ಮಾಡಬಲ್ಲದು. ಆದರೆ ಅದರ ಸದ್ಬಳಕೆ ಮಾಡುವ ಅವಶ್ಯಕತೆಯಿದೆ. ಅವಕಾಶಗಳು ಹಾಗೂ ಆಸಕ್ತಿ ನಮ್ಮನ್ನು ಬೆಳೆಸುತ್ತದೆ. ಕ್ರಿಯಾಶೀಲತೆ ಎನ್ನುವುದು ಪತ್ರಕರ್ತರಿಗೆ ಆಸ್ತಿಯಿದ್ದಂತೆ ಎಂದು ನುಡಿದರು.
ಕೃಷಿ ಪತ್ರಿಕೋದ್ಯಮ ಎನ್ನುವುದು ಇಂದಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಕೃಷಿ ಕುರಿತಾಗಿ ಲೇಖನಗಳನ್ನು ಬರೆಯುವ ಸಂದರ್ಭದಲ್ಲಿ ಸಂಪೂರ್ಣವಾದ ಹಾಗೂ ನೈಜ ಚಿತ್ರಣವನ್ನು ವಿವರಿಸುವ ಅಗತ್ಯವಿದೆ. ಕೇವಲ ಧನಾತ್ಮಕ ಅಂಶಗಳನ್ನೇ ಹೇಳಿದಾಗ, ಆ ಕೃಷಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ನಿರ್ಲಕ್ಷಿಸದಂತಾಗುತ್ತದೆ. ನಾವು ಬರೆದ ಲೇಖನವನ್ನು ಅನುಸರಿಸಿ, ಆ ಕೃಷಿಯನ್ನು ಅನುಸರಿಸಿದ ರೈತನಿಗೆ ನಷ್ಟವಾಗಲೂ ಬಹುದು. ಹೀಗಾಗಿ ಕೃಷಿ ಬರಹಗಳನ್ನು ಬರೆಯುವಾಗ ಲೇಖಕರಾದವರು ತಮ್ಮ ವಸ್ತುವಿನ ಬಗ್ಗೆ ನಿಖರವಾಗಿರಬೇಕು ಹಾಗೂ ವಾಸ್ತವವನ್ನೇ ಬರೆಯಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಸ್ತಾವನೆಗೈದು ಸ್ವಾಗತಿಸಿದ, ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಕರ್ತರ ಅನುಭವದ ಪಾಠ ಹೆಚ್ಚು ಪರಿಣಾಮಶಾಲಿ. ಈ ನಿಟ್ಟಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ‘ಪರ್ತಕತ್ರ ಮೇಷ್ಟು’ ಇಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭ ವಿಭಾಗದ ಉಪನ್ಯಾಸಕಿಯರಾದ ಭವ್ಯ ಪಿ.ಆರ್ ನಿಡ್ಪಳ್ಳಿ, ಕಾರ್ಯಕ್ರಮದ ಸಂಯೋಜಕಿ ರಾಧಿಕಾ ಕಾನತ್ತಡ್ಕ, ಸುಶ್ಮಿತಾ ಜಯಾನಂದ್, ಪ್ರಜ್ಞಾ ಬಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಕ್ಷಯ್ ಕುಮಾರ್ ಪಲ್ಲಮಜಲು ವಂದಿಸಿ, ಸೀಮಾ ಪೋನಡ್ಕ ಕಾರ್ಯಕ್ರಮ ನಿರೂಪಿಸಿದರು.