ಬಂಟ್ವಾಳ: ಫೆಬ್ರವರಿ ತಿಂಗಳಾಂತ್ಯಕ್ಕೆ ತಾಲೂಕಿನ ಕೆಲ ಭಾಗಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದ್ದು, ಸಮಸ್ಯೆ ಪರಿಹಾರಕ್ಕೆ ಈಗಿಂದಲೇ ಕಾರ್ಯನಿರ್ವಹಿಸುವಂತೆ ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಂಟ್ವಾಳ ತಾಲೂಕು ಪಂಚಾಯತ್ ಮಾಸಿಕ ಕೆಡಿಪಿ ಸಭೆಯು ಬಿ.ಸಿ.ರೋಡ್‌ನ ತಾಪಂ ಎಸ್‌ಜಿಎಸ್‌ವೈ ಸಭಾಂಗದಲ್ಲಿ ಮಂಗಳವಾರ ನಡೆಯಿತು.
ಕುಡಿಯುವ ನೀರಿನ ಅಭಾವವಿರುವ ಗ್ರಾಮದಲ್ಲಿ ಜಿಪಂ ಅನುದಾನ ಬಳಸಿ ಹೊಸ ಕೊಳವಿ ಬಾವಿಯನ್ನು ನಿರ್ಮಿಸಿ. ಅಲ್ಲದೆ, ಪಾಲುಬಿದ್ದ ಕೊಳವೆ ಬಾವಿಯನ್ನು ನವೀಕರಿಸುವ ಅಥವಾ ಇನ್ನೊಂದು ಕಡೆ ಜೋಡಿಸುವ ಕಾಮಗಾರಿಯನ್ನು ನಡೆಸುವಂತೆ ತಾಪಂ ಇಒ ರಾಜಣ್ಣ ಅವರು ಮೆಸ್ಕಾಂ ಅಧಿಕಾಗಳಿಗೆ ಸೂಚನೆ ನೀಡಿದರು.
ಬಂಟ್ವಾಳ ಅರಣ್ಯ ವಲಯಾಧಿಕಾರಿ ಸುರೇಶ್ ಸಭೆಗೆ ಮಾಹಿತಿ ನೀಡಿ, ಅರಣ್ಯ ಇಲಾಖೆಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಎಸ್ಸಿ, ಎಸ್ಟಿ ಹಾಗೂ ಅರಣ್ಯ ಪ್ರದೇಶದ ನಿವಾಸಿಗಳಿಗೆ ಎಲ್‌ಪಿಜಿ ಗ್ಯಾಸ್ ಸೌಲಭ್ಯವಿದ್ದು, ಈ ಬಗ್ಗೆ ೫೦ ಗ್ರಾಮಗಳಿಗೆ ಅರ್ಜಿ ಸಹಿತ ಮಾಹಿತಿ ನೀಡಲಾಗಿದೆ. ಆದರೆ, ೪ ಗ್ರಾಮಗಳ ೧೭ ಅರ್ಜಿಗಳು ಮಾತ್ರ ಬಂದಿವೆ ಎಂದು ತಿಳಿಸಿದರು.
ಅರಣ್ಯ ಪ್ರದೇಶದಲ್ಲಿರುವ ಗ್ರಾಮಗಳಿಗೆ ಎಸ್ಸಿ, ಎಸ್ಟಿ ಗ್ಯಾಸ್ ಯೋಜನೆಯ ಫಲಾನುಭವಿಗಳ ಆಯ್ಕೆಯ ಬಗ್ಗೆ ಅಧ್ಯಕ್ಷರಿಗೆ ಜವಾಬ್ದಾರಿ ನೀಡಿ, ಮತ್ತೊಮ್ಮೆ ಪರಿಶೀಲನೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಸಭೆಗೆ ಮಾಹಿತಿ ನೀಡಿ, ಬಂಟ್ವಾಳದಲ್ಲಿ ಮಂಗನ ಸಾವು, ಕಾಯಿಲೆ ಪ್ರಕರಣಗಳು ಇದುವರೆಗೂ ಪತ್ತೆಯಾಗಿಲ್ಲ.
ಈ ಬಗ್ಗೆ ಪ್ರತೀ ಗ್ರಾಮ ಮಟ್ಟದಲ್ಲಿ ಅರಣ್ಯ, ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ನಿಂತರವಾಗಿ ಜಾಗೃತಿ ಕಾರ್ಯಾಗಾರ ನಡೆಯುತ್ತಿದೆ ಎಂದರು.
ಮುಂಜಾಗೃತಾ ಕ್ರಮವಾಗಿ ಅರಣ್ಯ ಸಿಬ್ಬಂದಿ, ಕಾಡಂಚಿನ ಪ್ರದೇಶದ ಜನರನ್ನು ಗುರುತಿಸಿ ಮೈಗೆ ಹಚ್ಚುವ ರೋಗ ನಿರೋಧಕ ಡಿಎಂಪಿ ಆಯಿಲ್ ಅನ್ನು ವಿತರಣೆ ಮಾಡಲಾಗಿದೆ. ಕಾರಿಂಜ ಸಹಿತ ತಾಲೂಕಿನ ಇತರ ಭಾಗದಲ್ಲಿ ಕಾರ್ಯಾಚರಣೆ ನಡೆಸಿ,
ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ರಕ್ತ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಸಂಬಂಧಿಸಿ, ಚರ್ಚೆ ನಡೆಯಿತು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಹಶೀಲ್ದಾರ್ ರಶ್ಮಿ ಕಿಶೋರ್ ಉಪಸ್ಥಿತರಿದ್ದು, ಸಲಹೆ ನೀಡಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ ಹಾಜರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.