ಬೆಂಗಳೂರು: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-31ನ್ನು ಯೂರೋಪಿಯನ್ ಉಡಾವಣಾ ಸೇವಾ ಕಂಪನಿ ಏರಿಯನ್ ಸ್ಪೇಸ್ ರಾಕೆಟ್‌ನಿಂದ ಯಶಸ್ವಿಯಾಗಿ ಉಡಾಯಿಸಲಾಗಿದೆ. ಬುಧವಾರ ನಸುಕಿನಲ್ಲಿ ಫ್ರೆಂಚ್ ಗಯಾನಾದಿಂದ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದೆ.
ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯಲ್ಲಿ ಫ್ರಾನ್ಸ್ ವ್ಯಾಪ್ತಿಯಲ್ಲಿ ಬರುವ ಕೌರು ಎಂಬಲ್ಲಿರುವ ಏರಿಯನ್ ಉಡಾವಣಾ ಸಂಕೀರ್ಣದಿಂದ ಮುಂಜಾವ 2:31ಕ್ಕೆ ಉಪಗ್ರಹ ನಭಕ್ಕೆ ಚಿಮ್ಮಿತು. 42 ನಿಮಿಷಗಳ ಯಶಸ್ವಿ ಕಾರ್ಯಾಚರಣೆ ಬಳಿಕ ಏರಿಯನ್-5 ಉಡಾವಣಾ ವಾಹಕ ಜಿಸ್ಯಾಟ್-31 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.
“ಜಿಸ್ಯಾಟ್-31 ಉಡಾವಣೆ ಯಶಸ್ವಿಯಾಗಿರುವುದು ತೀರಾ ಹರ್ಷದಾಯಕ ವಿಚಾರ” ಎಂದು ಭಾರತದ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೋ)ಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್.ಪಾಂಡ್ಯನ್ ಹೇಳಿದ್ದಾರೆ.
ಜಿಸ್ಯಾಟ್-31 ಅತ್ಯಧಿಕ ಶಕ್ತಿಯ ಸಂವಹನ ಉಪಗ್ರಹವಾಗಿದ್ದು, ಕೆಯು-ಬ್ಯಾಂಡ್ ಹೊಂದಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಲವು ಉಪಗ್ರಹಗಳ ಜೀವಿತಾವಧಿ ಮುಕ್ತಾಯ ಹಂತದಲ್ಲಿದ್ದು, ಅವುಗಳ ಕಾರ್ಯವನ್ನು ಜಿಸ್ಯಾಟ್-31 ನಿರ್ವಹಿಸಲಿದೆ ಎಂದು ಅವರು ವಿವರಿಸಿದರು.
2,536 ಕೆಜಿ ತೂಕದ ಈ ಉಪಗ್ರಹ, ಈಗಾಗಲೇ ಕಕ್ಷೆಯಲ್ಲಿರುವ ಕೆಲ ಉಪಗ್ರಹಗಳ ಸೇವೆಯ ನಿರಂತರತೆಯನ್ನು ಖಾತ್ರಿಪಡಿಸುತ್ತದೆ. ಇದು ಭಾರತ ಹಾಗೂ ಭಾರತದ ದ್ವೀಪಗಳಿಗೆ ಸಂವಹನ ಸೇವೆಯನ್ನು ಸುಲಲಿತವಾಗಿ ಒದಗಿಸಲಿದೆ.