ಪುತ್ತೂರು: ವಿವೇಕಾನಂದ ಕಾಲೇಜು ಅನೇಕ ರೀತಿಯ ಅವಕಾಶಗಳನ್ನು ವಿದ್ಯಾರ್ಥಿ ಸಮೂಹಕ್ಕೆ ನೀಡುತ್ತಾ ಬಂದಿದೆ. ಇದೀಗ ಕಾಲೇಜಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಪಥ್ನಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದ ರಾಷ್ಟ್ರೀಯ ತಂಡಕ್ಕೆ ನಮ್ಮ ಕಾಲೇಜಿನ ಪ್ರೀತಿ ಡಿ ಆಯ್ಕೆಯಾಗಿ ಕಾಲೇಜಿಗೂ, ವೈಯಕ್ತಿಕವಾಗಿಯೂ ಕೀರ್ತಿ ಹೆಚ್ಚಿಸಿದ್ದಾರೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ತಿಳಿಸಿದರು.
ಅವರು ಇತ್ತೀಚೆಗೆ ದೆಹಲಿಯ ರಾಜಪಥ್ನಲ್ಲಿ ನಡೆದ ಪಥಸಂಚಲನಕ್ಕೆ ಕಾಲೇಜಿನ ಎನ್ಸಿಸಿ ಘಟಕದಿಂದ ಆಯ್ಕೆಯಾದ ಪ್ರೀತಿ.ಡಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾರ್ಜೆಂಟ್ ಪ್ರೀತಿ.ಡಿ ತುಂಬ ಅನುಭವಗಳು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಿಕ್ಕವು. ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವುದು ಇನ್ನೂ ಸಂತೋಷವನ್ನು ತಂದಿದೆ. ಇದೊಂದು ಭಾಗ್ಯ, ತನ್ನ ತಂದೆ- ತಾಯಿ, ಎನ್ಸಿಸಿ ಗುರಗಳು ಹಾಗೂ ತನ್ನ ಶಿಕ್ಷಕ ವೃಂದ, ಸ್ನೇಹಿತ ಬಂಧುಗಳು ಈ ಸಾಧನೆಗೆ ಕಾರಣ ಎಂದರು.
ಪ್ರೀತಿಯವರ ತಂದೆ ರಾಮ ಡಿ ಮಾತನಾಡಿ ನಮ್ಮ ಮಕ್ಕಳು ನಮ್ಮ ದೇಶ, ಶಿಕ್ಷಣ ಸಂಸ್ಥೆಯ ಹಾಗೂ ನಮಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು ಎಂಬುದೇ ಹೆತ್ತವರ ಕನಸು.
ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ ಎಂದರೆ ಅದು ಗೌರವದ ವಿಷಯ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮಗೆ ಹೆಮ್ಮೆ ತಂದುಕೊಟ್ಟಿದೆ ಎಂದರು.
ಕಾಲೇಜಿನ ಸಂಚಾಲಕ ಜಯರಾಮ ಭಟ್ ಮಾತನಾಡಿ ನಾವು ಇಂದು ಸುಖದಿಂದ ನಿದ್ರಿಸಲು ಕಾರಣ ನಮ್ಮ ಸೈನಿಕರು. ಅವರ ಸೇವೆಯನ್ನು ಎಂದಿಗೂ ಮರೆಯಬಾರದು. ಪ್ರೀತಿಯವರು ಕಾಲೇಜಿನ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿರುವುದು ನಮಗೆ ಹೆಮ್ಮೆ ತಂದಿದೆ. ಅವರ ಭವಿಷ್ಯ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರೀತಿ ಅವರ ತಾಯಿ ಹೇಮಾ ಡಿ, ಎನ್ಸಿಸಿ ಸಂಯೋಜಕ ಅತುಲ್ ಶೆಣೈ ಹಾಗೂ ಪ್ರಾಧ್ಯಾಪಕ ಕ್ಯಾ.ಡಿ.ಮಹೇಶ್ ರೈ ಎನ್ಸಿಸಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಡಾ.ರೋಹಿಣಾಕ್ಷ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮೊದಲು ಪ್ರೀತಿ ಡಿ ಅವರನ್ನು ವಿದ್ಯಾರ್ಥಿ ಸಂಘ ಹಾಗೂ ಎನ್ಸಿಸಿ ಘಟಕದ ವತಿಯಿಂದ ಪುತ್ತೂರು ಬಸ್ಸ್ಟಾಂಡ್ನಿಂದ ತೆರೆದ ವಾಹನದಲ್ಲಿ ಕಾಲೇಜಿಗೆ ಕರೆತರಲಾಯಿತು.