Sunday, November 24, 2024
ಸುದ್ದಿ

ಗ್ರಾಮದ ಅಭಿವೃದ್ಧಿಗೆ ಶಿಕ್ಷಣ ಹಾಗೂ ಆರೋಗ್ಯ ಮುಖ್ಯವಾಗುತ್ತದೆ: ಎಸ್.ಅಂಗಾರ – ಕಹಳೆ ನ್ಯೂಸ್

ಗುತ್ತಿಗಾರು: ಯಾವುದೇ ಗ್ರಾಮದ ಅಭಿವೃದ್ಧಿಯಲ್ಲಿ ಕೇವಲ ವ್ಯವಸ್ಥೆಗಳ ಸುಧಾರಣೆ ಮಾತ್ರಾ ಕಾರಣವಲ್ಲ. ಅದರ ಜೊತೆಗೆ ಶಿಕ್ಷಣ ಹಾಗೂ ಆರೋಗ್ಯದಲ್ಲಿಯೂ ಸುಧಾರಣೆ ಅಗತ್ಯವಿದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.

ಅವರು ಶನಿವಾರ ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಹಾಗೂ ಗ್ರಾಮವಿಕಾಸ ಸಮಿತಿ ಗುತ್ತಿಗಾರು ಮತ್ತು ದೇರಳಕಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಸಹಭಾಗಿತ್ವದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮಕ್ಕೆ ಕೊಡುಗೆಗಳು ಬೇಕು. ಅದಕ್ಕೆ ಅಧಿಕಾರವೇ ಮುಖ್ಯವಲ್ಲ.ಸಮಾಜದ ಹಿತದೃಷ್ಠಿಯಿಂದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಇದು ಗ್ರಾಮ ವಿಕಾಸದ ಮೂಲಕ ನಡೆಯುತ್ತಿದೆ. ಇದರ ಜೊತೆಗೆ ಸಹಕಾರ ಸಂಘವೂ ಕೈಜೋಡಿಸಿರುವುದು ಸಂತಸದ ಸಂಗತಿ. ಯಾವುದೇ ಸಹಕಾರಿ ಸಂಘಕ್ಕೆ ಇಚ್ಛಾಶಕ್ತಿ ಇದ್ದಾಗ ಯಾವ ಕೆಲಸ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿಥಿಯಾಗಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ಉತ್ತಮ ಆರೋಗ್ಯದಿಂದ ಉತ್ತಮ ಸದೃಢ ಸಮಾಜ ನಿರ್ಮಾಣ ಸಾಧ್ಯ.ಈ ನಿಟ್ಟಿನಲ್ಲಿ ಸಹಕಾರಿ ಸಂಘ ಹಾಕಿಕೊಂಡಿರುವ ಕಾರ್ಯಕ್ರಮ ಮಹತ್ವ ಪಡದಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುಳಿಯ ಕೇಶವ ಭಟ್ ಸಹಕಾರಿ ಕ್ಷೇತ್ರದ ಮೂಲ ಉದ್ದೇಶ ಈಡೇರಿಕೆಗೆ ಪ್ರಯತ್ನ ಮಾಡಲಾಗಿದೆ. ಸಹಕಾರಿ ವ್ಯವಹಾರದ ಲಾಭಾಂಶವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಈಗ ಇದನ್ನು ಸದಸ್ಯರ ಆರೋಗ್ಯದ ಹಿತದೃಷ್ಠಿಗೆ ಬಳಕೆ ಮಾಡಲಾಗುತ್ತಿದೆ. ಶಿಬಿರದಲ್ಲಿ ಪ್ರಥಮಹಂತದ ಚಿಕಿತ್ಸೆಗೆ ಹೆಚ್ಚಿನ ವ್ಯವಸ್ಥೆ ಬೇಕಾದಲ್ಲಿ ಸಂಘವೇ ಸಹಾಯ ಮಾಡಲಿದೆ ಎಂದರು. ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತ್ರಭಾನು ಮಾತನಾಡಿದರು.

ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ದೇರಳಕಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ಉಪವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಪೈ ಮಾತನಾಡಿ ಈ ಹಿಂದೆ ಸರಕಾರದಿಂದ ವಿವಿಧ ಯೋಜನೆ ಇತ್ತು. ಆದರೆ ಇದೀಗ ಎಲ್ಲಾ ಯೋಜನೆಗಳೂ ಒಂದಾಗಿ ಆಯುಷ್ಮಾನ್ ಭಾರತ ಎಂಬ ಯೋಜನೆಯ ಅಡಿಯಲ್ಲಿ ಬಂದಿವೆ.

ಇದರಲ್ಲಿ ಬಿಪಿಎಲ್ ಕಾರ್ಡ್‍ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಾಗುತ್ತದೆ ಎಪಿಎಲ್ ಕಾರ್ಡ್‍ದಾರರು ಸ್ವಲ್ಪ ಪ್ರಮಾಣದ ಹಣ ಪಾವತಿ ಮಾಡಬೇಕಾಗುತ್ತದೆ ಎಂದರು. ಜಿಲ್ಲೆಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇದೆ. ಆದರೆ ಕೆಲವೊಮ್ಮೆ ಸರಕಾರ ಕೆಲವೊಂದು ಕಾನೂನುಗಳಿಂದ ಬಡವರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಆಡಳಿತವು ಗಮನಹರಿಸಬೇಕು ಎಂದರು. ಜಿಲ್ಲೆಯಲ್ಲಿ ಈ ಕಾನೂನನ್ನು ಸರಳೀಕರಣ ಮಾಡಬೇಕು ಎಂದರು.

ವೇದಿಕೆಯಲ್ಲಿ ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷೆ ಮಂಜುಳಾ , ನಿರ್ದೇಶಕರುಗಳಾದ ಬಿ.ಕೆ.ಬೆಳ್ಯಪ್ಪ ಕಡ್ತಲ್‍ಕಜೆ, ಶೈಲೇಶ್ ಅಂಬೆಕಲ್ಲು, ದಿನೇಶ್ ಕೆ, ಕೃಷ್ಣಯ್ಯ ಮೂಲೆತೋಟ, ಆನಂದ ಕೆಂಬಾರೆ ಉಪಸ್ಥಿತರಿದ್ದರು.

ಶಿಬಿರದ ಸಂಯೋಜಕ ವೆಂಕಟ್ ದಂಬೆಕೋಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಕೆ.ಶರತ್ ವಂದಿಸಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿಸಿದರು.