ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ವಿಷಬೆರೆತ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿದೆ. ವ್ಯಕ್ತಿಯೋರ್ವ 30 ಪ್ಲಾಸ್ಟಿಕ್ ಪ್ಯಾಕ್‍ಗಳಲ್ಲಿ ಮದ್ಯ ಹಂಚಿದ್ದು, ಅದನ್ನು ಸೇವಿಸಿ ಮೊದಲ ದಿನವೇ 36 ಮಂದಿ ಮೃತಪಟ್ಟಿದ್ದರು.
ಇದೀಗ ಚಿಕಿತ್ಸೆ ಫಲಿಸದೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 100ರ ಗಡಿ ದಾಟಿದೆ. ಮದ್ಯದಲ್ಲಿ ಯೂರಿಯಾ, ಬ್ಯಾಟರಿ ಲಿಕ್ವಿಡ್, ಕಾಸ್ಟಿಕ್ ಸೋಡಾ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮತ್ತೇರಿಸುವ ಪದಾರ್ಥಗಳನ್ನು ಬಳಸಲಾಗಿದೆ ಎಂಬ ಶಂಕೆ ಮೂಡಿದೆ. ಈಗಾಗಲೇ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಪೊಲೀಸರು ಜಂಟಿಯಾಗಿ ಆರೋಪಿಗಳಿಗೆ ಬಲೆ ಬೀಸಿದ್ದು, ಸುಮಾರು 186 ಜನರನ್ನು ವಶಕ್ಕೆ ಪಡೆದಿದ್ದಾರೆ.