ಅಪರೇಶನ್ ಕಮಲದ ಸಂದರ್ಭದಲ್ಲಿ ಮಾತನಾಡಿದ ಆಡಿಯೋದಲ್ಲಿ ಇರುವ ಧ್ವನಿ ಯಾರದು ಎಂಬ ಚರ್ಚೆ ಹೆಚ್ಚಾಗಿತ್ತು, ಇದೀಗ ಶುಕ್ರವಾರದ ಆಡಿಯೋ ರಿಲೀಸ್ ಆದ ಬಳಿಕ ಈ ವಿಚಾರಕ್ಕೆ ತೆರೆ ಬಿದ್ದಿದ್ದು, ಹಲವು ನಾಯಕರು ಬಿ.ಎಸ್.ವೈ ವಿರುದ್ಧ ಕಿಡಿ ಕಾಡುತ್ತಿದ್ದರೆ.
ಹೌದು ಆಡಿಯೋದಲ್ಲಿರುವ ಧ್ವನಿ ನನ್ನದಾದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾವೇ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದರಿಂದ ತಕ್ಷಣ ರಾಜೀನಾಮೆ ನೀಡಲಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಹೆಲಿಪ್ಯಾಡ್‍ನಲ್ಲಿ ಭಾನುವಾರ ಮಾತನಾಡಿದ ಅವರು, ‘ಯಡಿಯೂರಪ್ಪ ತಾವು ಹೇಳಿದಂತೆ ನಡೆದುಕೊಳ್ಳಲಿ. ಶುಕ್ರವಾರದ ಆಡಿಯೋ ರಿಲೀಸ್ ಆದ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ್ದೇನು’ ಎಂದು ಪ್ರಶ್ನಿಸಿದರು. ಅಲ್ಲದೆ, ‘ನನ್ನದೇ ಧ್ವನಿಯಾಗಿದ್ದರೆ ರಾಜೀನಾಮೆ ಕೊಡುವೆ ಎಂದಿದ್ದರು. ಈಗ ರಾಜೀನಾಮೆ ಕೊಡಲಿ. ಕೊಟ್ಟಮಾತಿನಂತೆ ನಡೆದುಕೊಳ್ಳಲಿ’ ಎಂದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬ್ರಹ್ಮವಿದ್ಯಾನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಯಡಿಯೂರಪ್ಪಗೆ ಅಧಿಕಾರದ ಹುಚ್ಚು ಹಿಡಿದಿದೆ. ಇದರಿಂದ ಸಂವಿಧಾನಬದ್ಧ ಸಮ್ಮಿಶ್ರ ಸರ್ಕಾರವನ್ನು ಕುತಂತ್ರದಿಂದ ಕಿತ್ತೆಸೆಯಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.