Sunday, November 24, 2024
ಸುದ್ದಿ

ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆದಾಗ ಯಶಸ್ಸು ಸಾಧ್ಯ: ಪ್ರೊ.ಪಿ.ಎಸ್.ಯಡಪಡಿತ್ತಾಯ – ಕಹಳೆ ನ್ಯೂಸ್

ಪುತ್ತೂರು: ಪ್ರತಿ ವೃತ್ತಿಗೂ ತನ್ನದೇ ಆದ ಶಿಸ್ತಿದೆ. ಸರಿಯಾದ ಪಥದಲ್ಲಿ ನಿರ್ದಿಷ್ಟ ವೇಗದಲ್ಲಿ ಮುನ್ನುಗ್ಗಿದಾಗ ಮಾತ್ರ ಶ್ರೇಯಸ್ಸು ನಮ್ಮದಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ನಮ್ಮ ಸಂಯಮವನ್ನು ಕಳೆದುಕೊಳ್ಳಬಾರದು. ನಮ್ಮ ಆಸಕ್ತಿಯ ಕ್ಷೇತ್ರಕ್ಕೆ ನಮ್ಮನ್ನು ಸಮರ್ಪಿಸಿಕೊಂಡಾಗ ಬೆಳವಣಿಗೆ ಹೊಂದಲು ಸಾಧ್ಯ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಬಾಗ ಹಾಗೂ ಬೆಂಗಳೂರಿನ ವಿದ್ಯಾರ್ಥಿ ಪಥ ಪತ್ರಿಕೆಯ ಸಂಯಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ ‘ಸೃಜನಾ 2019’ ಪತ್ರಿಕೋದ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಧ್ಯಮ ಲೋಕಕ್ಕೆ ಪಾದಾರ್ಪಣೆ ಮಾಡಬಯಸುವವರು ಅದರ ವಿವಿಧ ಆಯಾಮಗಳ ಕುರಿತು ಕನಿಷ್ಟ ಜ್ಞಾನವನ್ನು ಹೊಂದಿದ್ದಾಗ, ಕೆಲಸ ಕಲಿಯುವುದು ಸುಲಭವೆನಿಸಿಕೊಳ್ಳುತ್ತದೆ. ಒಂದು ಮಾಧ್ಯಮಕ್ಕೆ ಒಬ್ಬ ವ್ಯಕ್ತಿಯನ್ನು ಮಾದರಿ ನಾಯಕನಾಗಿ ಬಿಂಬಿಸಬಲ್ಲ ಹಾಗೂ ದೊಡ್ಡ ವ್ಯಕ್ತಿಯನ್ನು ಶೂನ್ಯವಾಗಿಸಿ ಬಿಡಬಲ್ಲ ಶಕ್ತಿಯಿದೆ. ಸಮರ್ಥ ಮಾಧ್ಯಮ ಸದೃಢ ಸಮಾಜವನ್ನು ಕಟ್ಟಿಕೊಡಬಲ್ಲುದು ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಬರವಣಿಗೆಯ ಶೈಲಿ ಹಾಗೂ ಬಾಷಾ ಪ್ರಯೋಗ ಒಂದು ಲೇಖನದ ಅಂದವನ್ನು ಹೆಚ್ಚಿಸಬಲ್ಲದು. ಆಸಕ್ತಿಯಿರುವವರಿಗೆ ಬರೆಯಲು ಸಾಕಷ್ಟು ವಿಷಯಗಳಿವೆ. ಅವುಗಳನ್ನು ಗಮನಿಸುವ ಸಾಮಥ್ರ್ಯ ಬರಹಗಾರರಲ್ಲಿರಬೇಕು. ಒಂದು ಸಣ್ಣ ಬರಹ ಕೂಡ ಸಾಕಷ್ಟು ಪರಿಣಾಮ ಬೀರಬಲ್ಲದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಮಾತನಾಡಿ, ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಸಮಾಜದ ಮೇಲೆ ಅಗಾಧವಾದ ಪರಿಣಾಮ ಬೀರಬಲ್ಲ ಶಕ್ತಿ ಇಂದು ಮಾದ್ಯಮಕ್ಕಿದೆ. ಅದೇ ರೀತಿ ಪ್ರಸ್ತುತ ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಆದರೆ ಅವುಗಳ ದುರ್ಬಳಕೆ ಹೆಚ್ಚಿದೆ. ಯುವ ಜನತೆ ಅದರಲ್ಲೂ ಮುಖ್ಯವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಬೇಕಾಗಿದೆ. ಮಾಧ್ಯಮಗಳ ಸದುಪಯೋಗ ಮಾಡಿಕೊಳ್ಳುವಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿಯಿದೆ ಎಂದರು.

ಈ ಸಂದರ್ಭ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾ ನಿಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಎಸ್. ಅಶೋಕ್ ಕುಮಾರ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ್ ಉಪಸ್ಥಿತರಿದ್ದರು. ಎಂ.ಸಿ.ಜೆ ವಿದ್ಯಾರ್ಥಿನಿಯರಾದ ಲಿಖಿತಾ ಹಾಗೂ ಸುಷ್ಮಾ ಪ್ರಾರ್ಥಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಕರ್ತವ್ಯಾಧಿಕಾರಿ ವೆಂಕಟೇಶ್ ಸ್ವಾಗತಿಸಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದರು. ಉಪನ್ಯಾಸಕಿ ಪ್ರಜ್ಞಾ ಬಾರ್ಯ ವಂದಿಸಿ, ಭವ್ಯ ಪಿ. ಆರ್ ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪಥ ಪತ್ರಿಕೆಯ ಸಂಪಾದಕ ಡಾ.ರೋಹಿಣಾಕ್ಷ ಶಿರ್ಲಾಲು, ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ ಕಾರ್ಯಕ್ರಮದಲ್ಲಿ ಹಾಜರಿದ್ದರು.