ನವದೆಹಲಿ: ಜಮ್ಮು ಕಾಶ್ಮೀರ ಉರಿ ವಲಯದಲ್ಲಿರುವ ರಾಜ್ವಾನಿಯಲ್ಲಿನ ಸೇನಾ ಶಸ್ತ್ರಾಸ್ತ್ರ ಘಟಕದ ಮೇಲಿನ ಸಂಭಾವ್ಯ ಉಗ್ರ ದಾಳಿಯನ್ನು ನಮ್ಮ ಜವಾನರು ವಿಫಲಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಗಸ್ತು ನಿರತರಾಗಿದ್ದ ಯೋಧರಿಗೆ ಶಂಕಿತ ಚಟುವಟಿಕೆಗಳು ಕಂಡುಬಂದ ಬಂದ ಹಿನ್ನಲೆಯಲ್ಲಿ ತಕ್ಷಣವೇ ಅವರು ಗುಂಡಿನ ದಾಳಿ ನಡೆಸಿದರು.
ಆ ಮೂಲಕ ಯಾವುದೇ ಸಂಭಾವ್ಯ ಉಗ್ರ ದಾಳಿಯನ್ನು ಸೇನೆ ವಿಫಲಗೊಳಿಸಿದೆ ಎಂದು ವರದಿಯಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಸೇನಾ ಜವಾನರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ಬಳಿಕ ಸಂಪೂರ್ಣ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು, ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೇನೆಯ ಎಲ್ಲಾ ಸ್ಥಳೀಯ ಪಡೆಗಳನ್ನು ಹಾಗೂ ಕೆಂದ್ರೀಯ ಅರೆಸೇನಾಪಡೆಯ ಜವಾನರನ್ನು ಉರಿ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಇಬ್ಬರು ಶಂಕಿತರನ್ನು ಸೇನೆ ವಶಕ್ಕೆ ಪಡೆದಿದ್ದು ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕಣಿವೆ ರಾಜ್ಯದ ಕುಲ್ಗಾಂ ಜಿಲ್ಲೆಯಲ್ಲಿ ಐವರು LET ಉಗ್ರರನ್ನು ಸೇನೆ ಹೊಡೆದುರುಳಿಸಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.