ಪುತ್ತೂರು: ಶಿಕ್ಷಣ ಕೇವಲ ಕಾಲೇಜಿಗೆ ಮಾತ್ರ ಸೀಮಿತವಾಗಿರಬಾರದು. ಬದಲಾಗಿ ನಮ್ಮ ಸುತ್ತಮುತ್ತಲಿನ ಪರಿಸರಕ್ಕೂ ವಿನಿಯೋಗವಾಗುವಂತಿರಬೇಕು. ಹಾಗೆಯೇ ಗ್ರಾಮಾಂತರ ಪ್ರದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಇದರ ಪ್ರಯೋಜನವನ್ನು ನೀಡಬೇಕು. ಇದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮುಂದೊಂದು ದಿನ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ. ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ಅವರು ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ಹಾಗೂ ಗಣಿತ ಶಾಸ್ತ್ರ ವಿಭಾಗದ ವತಿಯಿಂದ ಶಾಂತಿನಗರ ಪ್ರೌಢಶಾಲೆಯಲ್ಲಿ ನಡೆದ ‘ಪ್ರಯೋಗ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ನಾವು ಪ್ರೌಢಶಾಲೆಯಿಂದಲೇ ಮೂಲ ವಿಜ್ಞಾಗಳ ಬಗೆಗೆ ಮಾಹಿತಿಯನ್ನು ಕಲಿಯುತ್ತಾ ಬಂದರೆ ಮುಂದೆ ನಿರ್ದಿಷ್ಟ ವಿಷಯದ ಬಗೆಗೆ ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ. ಹಾಗೆಯೇ ಶಿಕ್ಷಣ ಕಲಿಯುವ ಸಂದರ್ಭದಲ್ಲಿ ನಮ್ಮ ವಿವೇಕಕ್ಕೆ ಸರಿ ಹೊಂದುವಂತೆ ನಮ್ಮನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಶಾಂತಿನಗರ ಪ್ರೌಢಶಾಲೆ ಕಾರ್ಯಾಧ್ಯಕ್ಷ ಜಯಾನಂದ ಕೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ನೆಲೆಯ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಮುಂದೆ ಅವರ ಭವಿಷ್ಯವು ಉಜ್ವಲವಾಗುತ್ತದೆ. ಅಲ್ಲದೇ ಮುಂದೆ ಅವರ ಉನ್ನತ ಶಿಕ್ಷಣಕ್ಕೆ ಇದು ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಿದರು.ಇನ್ನೋರ್ವ ಅತಿಥಿ ಉಪ್ಪಿನಂಗಡಿ ಜೆಸಿಐ ಅಧ್ಯಕ್ಷ ಮೋನಪ್ಪ ಗೌಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಸಂಯೋಜಕ ಡಾ. ಕಾರಂತ್ ವಿ ಆರ್ ಪ್ರಸ್ತಾವನೆಗೈದರು. ಶಾಂತಿನಗರ ಪ್ರೌಢಶಾಲೆ ಸಹಶಿಕ್ಷಕಿ ಗೀತಾ ಸ್ವಾಗತಿಸಿ, ಸಹಶಿಕ್ಷಕಿ ದೀಪಾ ವಂದಿಸಿದರು. ವಿದ್ಯಾರ್ಥಿನಿ ಗೀತಾ ನಿರೂಪಿಸಿದರು.