ಬೆಂಗಳೂರು: ಆಡಿಯೋ ಸಿಡಿ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆ ಬೇಡ ಎಂದು ಬಿಜೆಪಿ ಇಂದೂ ಸಹ ಸದನದಲ್ಲಿ ಪರಿ ಪರಿಯಾಗಿ ಮನವಿ ಮಾಡಿತು.
ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ ಆಗಿದ್ದಾಗಿದೆ, ತಮ್ಮ ವೈಯಕ್ತಿಕ ಸ್ನೇಹಿತನಾಗಿ ಹೇಳುತ್ತಿದ್ದೇನೆ. ದೊಡ್ಡ ಮನಸ್ಸು ಮಾಡಿ ಈ ಪ್ರಕರಣ ಇಲ್ಲಿಗೆ ಕೈಬಿಡಿ. ನಾವು ತಪ್ಪು ಒಪ್ಪಿಕೊಳ್ಳುತ್ತೇವೆ. ದಯಮಾಡಿ ಈ ದಿಕ್ಕಿನಲ್ಲಿ ಯೋಚನೆ ಮಾಡಿ. ನಮಗೆ ಈ ವಿಷಯದಲ್ಲಿ ಹಠವಿಲ್ಲ ಎಂದು ಮನವಿ ಮಾಡಿದರು.
ಎಸ್‍ಐಟಿ ತನಿಖೆಗೆ ನೀಡಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಕಾನೂನು ಬದ್ಧ ಹೋರಾಟ ನಡೆಸುತ್ತೇವೆ. ತಮ್ಮ ಕಾಲದಲ್ಲಿ ಎಂಎಲ್‍ಎಗಳನ್ನು ಕ್ರಿಮಿನಲ್ ಪ್ರೊಸೀಜರ್ ವ್ಯಾಪ್ತಿಗೆ ತರುವ ಕೆಲಸ ಆಗುವುದು ಬೇಡ. ಇದನ್ನು ರಾಜಕೀಯವಾಗಿ ತೆಗೆದುಕೊಳ್ಳಬೇಡಿ. ಯಾರಿಗೋ ವೆಪನ್ ಕೊಟ್ಟು ಶಾಸಕರನ್ನು ಬಲಿಪಶು ಮಾಡುವ ಪ್ರಕ್ರಿಯೆಗೆ ನಿಮ್ಮಿಂದ ಚಾಲನೆ ಸಿಗುವುದು ಬೇಡ ಎಂದು ಸ್ಪೀಕರ್‍ಗೆ ಮಾಧುಸ್ವಾಮಿ ಮನವಿ ಮಾಡಿದರು.
ಹೀಗಾಗಿ ಆಡಿಯೋ ಸಿಡಿ ಹಗರಣ ಎಸ್‍ಐಟಿ ತನಿಖೆ ಬೇಡ. ಆದೇಶ ಮರು ಪರಿಶೀಲಿಸಿ. ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರೊಸೀಜರ್ ಅನುಸರಿಸಬೇಕು. ಎಸ್‍ಐಟಿಯಿಂದ ಅದು ಸಾಧ್ಯವಿಲ್ಲ. ಕ್ರಿಮಿನಲ್ ಪ್ರೊಸೀಜರ್ ನಲ್ಲಿ ಎಫ್‍ಐಆರ್ ಸಲ್ಲಿಸುವಾಗ ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸಬೇಕು. ನೀವು ಸಹ ಹಲವು ಪೊಲೀಸ್ ಕೇಸ್‍ಗಳಲ್ಲಿ ಬಲಿಪಶು ಆಗಿದ್ದೀರಿ. ದಯಮಾಡಿ ಶಾಸಕರನ್ನು ಅಂತಹ ಪೊಲೀಸರ ವಶಕ್ಕೆ ಕೊಡಬೇಡಿ ಎಂದು ಮಾಧುಸ್ವಾಮಿ ಒತ್ತಾಯಿಸಿದರು.
ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಕೋಲ್ಕತ್ತಾ ಮುಖ್ಯಮಂತ್ರಿ ಸಿಬಿಐನ್ನೇ ಪ್ರಶ್ನಿಸಿದ್ದಾರೆ. ಅಂತಹುದರಲ್ಲಿ ನಾವು ಎಸ್‍ಐಟಿಯನ್ನು ಸುಮ್ಮನೆ ಬಿಡುತ್ತೇವೆಯೇ. ಕೋರ್ಟಿನಲ್ಲಿ ಖಂಡಿತ ಪ್ರಶ್ನಿಸುತ್ತೇವೆ. ಪೊಲೀಸರ ಜತೆಗಿನ ದೋಸ್ತಿ, ದುಷ್ಮನಿ ಎರಡೂ ಬೇಡ. ಅವರಿಂದ ಅಂತರ ಕಾಯ್ದುಕೊಳ್ಳಬೇಕು.
ನಾಲ್ಕು ಗೋಡೆಗಳ ಒಳಗೆ ಕುಳಿತು ತಾವು ಇದನ್ನು ಸರಿಪಡಿಸಬಹುದಿತ್ತು. ನಮ್ಮ ಭಾವನೆಗಳಿಗೆ ಸಭಾದ್ಯಕ್ಷರು ಬೆಲೆ ಕೊಡಲಿಲ್ಲ ಎಂಬ ಆರೋಪ ಬರುವುದು ಬೇಡ ಎಂದು ಕೋರಿದ ಮಾಧುಸ್ವಾಮಿ ನ್ಯಾಯಾಲಯ ಪ್ರಕ್ರಿಯೆ ಪ್ರತಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದರು.