ಮೈಸೂರು: ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಭೂಸ್ವಾಧೀನಕ್ಕಾಗಿ ನಾಲ್ವರು ಭೂಮಾಲೀಕರಿಗೆ ಹೆಚ್ಚುವರಿ ಭೂಪರಿಹಾರ 8.83 ಕೋಟಿ ನೀಡದಿರುವುದಕ್ಕೆ ಪಾಲಿಕೆ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಇಲ್ಲಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯದ ಸಿಬ್ಬಂದಿ ಆದೇಶದ ಪ್ರತಿ ಹಿಡಿದು ಸೋಮವಾರ ಆಯುಕ್ತರ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಹೊರಗಡೆ ಹಾಕಿದರು. ಈ ವೇಳೆ ಅಧಿಕಾರಿಗಳು 60 ದಿನಗಳ ಕಾಲಾವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಏನಿದು ಪ್ರಕರಣ?
1997ರಲ್ಲಿ ಇಲ್ಲಿನ ಗೊರೂರಿನಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಪಾಲಿಕೆ ಭೂ ಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಿಸಿತ್ತು. ಆದರೆ, ಶಂಕರ್, ದಾಕ್ಷಾಯಿಣಿ, ವಿಜಯಶಂಕರ್ ಹಾಗೂ ಶಿವಸ್ವಾಮಿ ಎಂಬುವವರು ಹೆಚ್ಚುವರಿ ಭೂ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಇವರಿಗೆ ಹೆಚ್ಚುವರಿಯಾಗಿ ಒಟ್ಟು 8.83 ಕೋಟಿ ಭೂ ಪರಿಹಾರ ನೀಡಬೇಕು ಎಂದು ಆದೇಶಿಸಿತು. ಆದರೆ, ಕಾಲಮಿತಿಯಲ್ಲಿ ಪಾಲಿಕೆ ಈ ಪರಿಹಾರ ನೀಡಿರಲಿಲ್ಲ. ಸದ್ಯ, ಅನುದಾನದ ಕೊರತೆಯಿಂದಾಗಿ ಹೆಚ್ಚುವರಿ ಭೂ ಪರಿಹಾರ ನೀಡಲು ಆಗುತ್ತಿಲ್ಲ ಎಂಬ ಕಾರಣ ನೀಡಿ 60 ದಿನಗಳ ಕಾಲಾವಕಾಶವನ್ನು ಪಾಲಿಕೆ ಪಡೆದುಕೊಂಡಿದೆ.