ಪುತ್ತೂರು: ಗುರಿಯನ್ನು ಸಾಧಿಸುವ ಪ್ರಬಲ ಇಚ್ಛೆಯುಳ್ಳವನನ್ನು ಯಾವುದೇ ಅಡೆತಡೆಗಳು ನಿಲ್ಲಿಸಲಾರವು. ಕಷ್ಟ ಬಂದಾಗ ಹಿಂಜರಿದರೆ ಅದು ದ್ವಿಗುಣಗೊಳ್ಳುತ್ತದೆ. ಅದೇ ರೀತಿ ಆ ಸಮಸ್ಯೆಗಳನ್ನು ಲೆಕ್ಕಿಸದೇ ಮುನ್ನುಗ್ಗಿದರೆ, ಕಷ್ಟವೆಂದು ಕಾಡಿದ್ದು ನೀರ ಮೇಲಣ ಗುಳ್ಳೆಯಂತೆ ಕರಗಿಹೋಗುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಬಾಕರ್ ಹೇಳಿದರು.
ಅವರು ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಗಳು, ರಾಜ್‍ಪಥ್‍ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಪಥ ಸಂಚಲನದಲ್ಲಿ ಪಾಲ್ಗೊಂಡ ತಮ್ಮ ಸಹಪಾಠಿ, ಎನ್‍ಸಿಸಿ ಕೆಡೆಟ್, ಸಾರ್ಜೆಂಟ್ ಪ್ರೀತಿ ಡಿ. ಅವರನ್ನು ಗೌರವಿಸುವ ಸಲುವಾಗಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು.
ಯಶಸ್ಸನ್ನು ಪಡೆಯಲು ಯಾವುದೇ ರಾಜಮಾರ್ಗವಿಲ್ಲ. ಒಬ್ಬ ವ್ಯಕ್ತಿ ಯಶಸ್ಸನ್ನು ಪಡೆದುಕೊಂಡಾಗ ರಾಜಮಾರ್ಗ ಅವನಿಗಾಗಿ ತೆರೆದುಕೊಳ್ಳುತ್ತದೆ. ಸಿಕ್ಕ ಅವಕಾಶಗಳನ್ನು ಬಾಚಿಕೊಳ್ಳಬೇಕು. ಯಾಕೆಂದರೆ ಅವುಗಳನ್ನು ನಮ್ಮ ಗುರಿ ಸಾಧಿಸಲು ಮೆಟ್ಟಿಲುಗಳಂತೆ, ನಮ್ಮನ್ನು ನಮ್ಮಿಚ್ಛೆಯ ರಂಗದಲ್ಲಿ ಗುರುತಿಸಬಲ್ಲ ಶಕ್ತಿ ಆ ಅವಕಾಶಗಳಿಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾಲೇಜಿನ ಎನ್‍ಸಿಸಿ ಘಟಕದ ಸಂಚಾಲಕ ಭಾಮಿ ಅತುಲ್ ಶೆಣೈ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಮೊದಲು ಹೆತ್ತವರು ಗುರುತಿಸಬೇಕು. ಅವರ ವ್ಯಕ್ತಿತ್ವ ಬೆಳವಣಿಗೆಗೆ ಬೇಕಾದ ಪೂರಕ ತರಬೇತಿಯನ್ನು ನೀಡಬೇಕು. ಬದಲಾಗಿ ತಮ್ಮ ಇಷ್ಟವನ್ನು ಮಕ್ಕಳ ಮೇಲೆ ಹೇರಹೋದರೆ ಅವರಲ್ಲಿನ ನೈಜ ಪ್ರತಿಭೆ ಸುಪ್ತವಾಗಿಯೇ ಉಳಿದುಬಿಡುತ್ತದೆ. ಎಂದಿಗೂ ಒಂದು ಪ್ರತಿಭೆ ವ್ಯರ್ಥ ಎನಿಸಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಹುದುಗಿದೆ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಅವರು ಮುಂದುವರೆಯ ಬಯಸಿದಾಗ ಅವರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ದೊರೆಯುವಂತಾಗಬೇಕು. ನಿರಂತರ ಅಭ್ಯಾಸ, ಸಾಧಿಸುವ ಛಲ ಮುಖ್ಯವೆನಿಸಿಕೊಳ್ಳುತ್ತದೆ. ಮೆಚ್ಚುಗೆಯ ಮಾತುಗಳು ಪ್ರೇರಣಾ ಶಕ್ತಿಯಾಗಿ ಕಾರ್ಯ ನಿರ್ವಹಿಸಲ್ಲವು ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಸಾರ್ಜೆಂಟ್ ಪ್ರೀತಿ ಡಿ., ದೆಹಲಿ ಹಾಗೂ ಆರ್.ಡಿ.ಕ್ಯಾಂಪ್ ಕುರಿತಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಾಧನೆಯ ಹಾದಿ ಸುಗಮವಾಗಿಲ್ಲ. ಕಠಿಣ ಹೆಜ್ಜೆಗಳನ್ನಿಡಬೇಕಾಗುತ್ತದೆ. ಕೆಲವೊಮ್ಮೆ ಪರಿಸ್ಥಿತಿಯೊಂದಿಗೆ, ಜನರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಡೆಯಬೇಕಾಗುತ್ತದೆ.
ಒಂದು ಗುಂಪಿನಲ್ಲಿ ಕೆಲಸಮಾಡಬೇಕಾಗಿ ಬಂದಾಗ ಒಂದಾಗಿ ಕಾರ್ಯನಿರ್ವಹಿಸುವ ಅಗತ್ಯತೆ ಇರುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಸಾರ್ಜೆಂಟ್ ಪ್ರೀತಿ ಅವರ ಅವಳಿ ಸಹೋದರಿ ಪ್ರಿಯಾ ಡಿ, ತಮ್ಮ ಸಹೋದರಿಯ ಕುರಿತಾಗಿ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಹೆಚ್.ಜಿ.ಶ್ರೀಧರ್, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಕಾರಂತ್, ಕನ್ನಡ ಪ್ರಾಧ್ಯಾಪಕ ಕ್ಯಾ. ಮಹೇಶ್ ರೈ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲತಾ ಸ್ವಾಗತಿಸಿ, ವಿದ್ಯಾರ್ಥಿ ಕೃಷ್ಣ ಪ್ರಸಾದ್ ವಂದಿಸಿದರು. ಪವಿತ್ರಾ ಹಾಗೂ ಪ್ರೇಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.