ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ‘ಆಪರೇಷನ್ ಕಮಲ’ದ ಸುತ್ತ ಗಿರಕಿ ಹೊಡೆಯುತ್ತಿದ್ದ ರಾಜ್ಯ ರಾಜಕಾರಣ ಕಳೆದ ಮೂರ್ನಾಲ್ಕು ದಿನಗಳಿಂದ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.
ಗುರುಮಿಟ್ಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ್ ಅವರನ್ನು ಸೆಳೆಯುವ ಸಲುವಾಗಿ ಅವರ ಪುತ್ರ ಶರಣಗೌಡ ಕಂದಕೂರ್ ಅವರ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕರುಗಳಾದ ಶಿವನಗೌಡ ನಾಯಕ್ ಹಾಗೂ ಪ್ರೀತಂ ಗೌಡ ಮಾತನಾಡಿದ್ದಾರೆನ್ನಲಾದ ಆಡಿಯೋ ಟೇಪ್ ಬಹಿರಂಗಗೊಂಡ ಬಳಿಕ ಈ ಬೆಳವಣಿಗೆಗಳಾಗುತ್ತಿವೆ.
ಈ ಆಡಿಯೋ ಟೇಪ್ ನಲ್ಲಿ ಶಿವನಗೌಡ ನಾಯಕ್ ಸ್ಪೀಕರ್ ರಮೇಶ್ ಕುಮಾರ್ ಅವರ ಕುರಿತು ಆಡಿದ ಆಕ್ಷೇಪಾರ್ಹ ಮಾತುಗಳಿಂದಾಗಿ ಕಳೆದ ಎರಡು ದಿನಗಳಿಂದ ಸದನ ಇದೇ ಚರ್ಚೆಯಲ್ಲಿ ಮುಳುಗಿದೆ.
ಇದರ ಮಧ್ಯೆ ಇಂದು ಬಿಡುಗಡೆಯಾದ ಆಡಿಯೋ ಟೇಪ್ ನ ಮುಂದುವರೆದ ಭಾಗದಲ್ಲಿ ಶಾಸಕ ಪ್ರೀತಂಗೌಡ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಕುರಿತು ಆಡಿರುವ ಮಾತು ಆ ಪಕ್ಷದ ಕಾರ್ಯಕರ್ತರನ್ನು ಕೆರಳಿಸಿದ್ದು, ಹಾಸನದ ಪ್ರೀತಂ ಗೌಡರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರೀತಂ ಗೌಡ, ನನ್ನ ಹತ್ಯೆಗೆ ಜೆಡಿಎಸ್ ಕಾರ್ಯಕರ್ತರು ಯತ್ನಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಸಹೋದರ ಸಚಿವ ರೇವಣ್ಣ ಅವರ ಕುಮ್ಮಕ್ಕು ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದರ ಮಧ್ಯೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಗುರುಮಿಟ್ಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣಗೌಡ, ಬಿಜೆಪಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ದೂರು ಸಲ್ಲಿಸಲು ಮುಂದಾಗಿದ್ದು, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿದ್ದಾರೆ.