ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಿದ್ದು, 42 ಯೋಧರು ಹುತಾತ್ಮರಾಗಿದ್ದಾರೆ.
ಐಇಡಿ ಸ್ಫೋಟದಲ್ಲಿ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ.
ಆವಂತಿಪುರದಲ್ಲಿ ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಯನ್ನು ರವಾನಿಸಲಾಗಿದ್ದು, ಇಡೀ ಪ್ರದೇಶವನ್ನು ಈಗ ಸುತ್ತುವರಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರದ ಬಡಗಾಂವ್‌ನಲ್ಲಿ ನಿನ್ನೆಯಷ್ಟೇ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಘಟನೆಗೆ ಪ್ರತೀಕಾರವಾಗಿ ಉಗ್ರರು ಎಂದು ಐಇಡಿ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ.