Friday, September 20, 2024
ಸುದ್ದಿ

ಹಿಂದುತ್ವದ ಹರಿಕಾರ, ರಾಜಕೀಯ ಮುಸ್ಸದ್ದಿ | ‘ ಭೀಷ್ಮ ‘ ಎಲ್.ಕೆ. ಅಡ್ವಾಣಿ

ಕಹಳೆ ವಿಶೇಷ ವರದಿ : ನಮ್ಮ ದೇಶದ ಅಗ್ರಪಂಕ್ತಿಯ ರಾಜಕೀಯ ನೇತಾರರಲ್ಲಿ ಲಾಲಕೃಷ್ಣ ಆಡ್ವಾಣಿಯವರದು ಬಹುಮುಖ್ಯ ಹೆಸರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಂಘಟನೆ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಅವರು, ಆರ್​ಎಸ್​ಎಸ್ ಪ್ರೇರಣೆಯಿಂದಲೇ ರಾಜಕೀಯಕ್ಕೆ ಬಂದರು. ಸಾಮಾನ್ಯ ಕಚೇರಿ ಕಾರ್ಯದರ್ಶಿಯಿಂದ ದೇಶದ ಉಪಪ್ರಧಾನಿವರೆಗಿನ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವಿ ನಾಯಕ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಬಾಲ್ಯ ಜೀವನ :

ಆಡ್ವಾಣಿಯವರು ಹುಟ್ಟಿದ್ದು, ಬೆಳೆದದ್ದು ಈಗಿನ ಪಾಕಿಸ್ತಾನದ ಕರಾಚಿಯಲ್ಲಿ. ತಂದೆ ಕಿಶನ್​ಚಂದ್, ತಾಯಿ ಜ್ಯಾನಿದೇವಿ, ತಂಗಿ ಶೀಲಾ. 1947ರ ಭಾರತ ವಿಭಜನೆಗೆ ಮುಂಚೆ ಅವರ ಪೂರ್ವಿಕರು ಕರಾಚಿಯಲ್ಲೇ ನೆಲೆಸಿದ್ದರು. 1936-42ರವರೆಗೆ ಆರು ವರ್ಷ ಕರಾಚಿಯ ಸೇಂಟ್ ಪ್ಯಾಟ್ರಿಕ್ ಹೈಸ್ಕೂಲ್​ನಲ್ಲಿ ವಿದ್ಯಾಭ್ಯಾಸ. 1947ರಲ್ಲಿ ದೇಶ ವಿಭಜನೆಯಾದಾಗ ಕರಾಚಿಯಿಂದ ದೆಹಲಿಗೆ ಬಂದರು.

ರಾಜಕೀಯ ಮತ್ತು ಅಡ್ವಾಣಿ :

1957ರ ಹೊತ್ತಿಗೆ ಜನಸಂಘ ಸ್ವಲ್ಪಮಟ್ಟಿಗೆ ಪ್ರಭಾವ ಬೆಳೆಸಿಕೊಂಡಿತ್ತು. ಅಟಲ್ ಬಿಹಾರಿ ವಾಜಪೇಯಿ ಸೇರಿ ಕೆಲವರು ಸಂಸತ್ತಿಗೆ ಆಯ್ಕೆಯಾಗಿದ್ದರು. ಆ ವೇಳೆ ಪಕ್ಷದ ಕಾರ್ಯಚಟುವಟಿಕೆಗಳು ಮತ್ತು ಸಂಸದೀಯ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಸಮರ್ಥ ಕಾರ್ಯಕರ್ತನ ಅಗತ್ಯ ದೆಹಲಿಯಲ್ಲಿತ್ತು. ಆಗ ಜನಸಂಘದ ಅಧ್ಯಕ್ಷರಾಗಿದ್ದ ಪಂಡಿತ್ ದೀನದಯಾಳ ಉಪಾಧ್ಯಾಯರಿಗೆ ಹೊಳೆದದ್ದು ಆಡ್ವಾಣಿ ಹೆಸರು. ಹೊಸ ಹೊಣೆಯೊಂದಿಗೆ ಆಡ್ವಾಣಿಯವರ ರಾಜಕೀಯ ಪ್ರವೇಶವೂ ಆಯಿತು. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೊಷಣೆಯಾದಾಗ ವಾಜಪೇಯಿ, ಆಡ್ವಾಣಿಯವರನ್ನು ಬಂಧಿಸಲಾಯಿತು. ಜೈಲಿನಲ್ಲೂ ವಾಜಪೇಯಿ ಮತ್ತು ಆಡ್ವಾಣಿಯನ್ನು ಒಂದೇ ಕೋಣೆಯಲ್ಲಿ ಇಟ್ಟಿದ್ದ್ದಂದ ಹಲವು ವಿಷಯಗಳ ಬಗ್ಗೆ ರ್ಚಚಿಸಲು, ತಿಳಿದುಕೊಳ್ಳಲು ಅವಕಾಶವಾಯಿತು. ಆಡ್ವಾಣಿ ಜೈಲಿನಲ್ಲಿ ಕನ್ನಡ ಮಾತನಾಡುವವರ ಸಹವಾಸದಲ್ಲೇ ಇದ್ದುದರಿಂದ ಕೆಲವೇ ದಿನಗಳಲ್ಲಿ ದಿನಪತ್ರಿಕೆಗಳ ಶೀರ್ಷಿಕೆಗಳನ್ನು ಓದುವಷ್ಟು ಕನ್ನಡ ಕಲಿತರು. 1977ರ ಜ.18ರಂದು ಆಡ್ವಾಣಿ ಬಿಡುಗಡೆ ಹೊಂದಿ ದೆಹಲಿಗೆ ತೆರಳಿದರು.

ರಥಯಾತ್ರೆ ಮತ್ತು ಅಡ್ವಾಣಿ :

ಬಿಜೆಪಿಯನ್ನು ಅಧಿಕಾರದ ಗದ್ದುಗೆಯ ಹತ್ತಿರಕ್ಕೆ ಒಯ್ಯಲು ಆಡ್ವಾಣಿ ಬಳಸಿದ ಪರಿಣಾಮಕಾರಿ ತಂತ್ರ ‘ರಥಯಾತ್ರೆ’. ಒಂದೊಂದು ಬಾರಿ ಒಂದೊಂದು ವಿಷಯವನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಸಾವಿರಾರು ಕಿಲೋಮೀಟರ್​ಗಳನ್ನು ಅವರು ಕ್ರಮಿಸಿದರು. ನೂರಾರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದರು. ಇದರಿಂದ ಅವರು ಜನಮಾನಸಕ್ಕೆ ಹತ್ತಿರವಾದದ್ದಷ್ಟೇ ಅಲ್ಲ, ಕೆಲವೇ ರಾಜ್ಯಗಳಿಗೆ ಸೀಮಿತವಾಗಿದ್ದ ಬಿಜೆಪಿಗೆ ರಾಷ್ಟ್ರವ್ಯಾಪಿ ಮನ್ನಣೆ ಸಿಗುವಂತೆ ಮಾಡಿದರು. ಬೆರಳೆಣಿಕೆಯಷ್ಟಿದ್ದ ಸಂಸತ್ ಸದಸ್ಯರ ಸಂಖ್ಯೆ ನೂರರ ಗಡಿ ದಾಟಿ ಅಧಿಕಾರಕ್ಕೆ ಹತ್ತಿರವಾಗುವಂತೆ ಮಾಡಿದರು. 1990ರ ಸೆಪ್ಟೆಂಬರ್ 25ರಂದು ಆರಂಭಗೊಂಡ ‘ಸೋಮನಾಥದಿಂದ ಅಯೋಧ್ಯೆಯವರೆಗೆ’ ರಥಯಾತ್ರೆಗೆ ಎಲ್ಲೆಡೆ ಅಭೂತಪೂರ್ವ ಸ್ವಾಗತ ದೊರೆಯಿತು. ಒಟ್ಟು 10 ಸಾವಿರ ಕಿ.ಮೀ. ದೂರ ಕ್ರಮಿಸುವ ಯೋಜನೆ ಮಾಡಲಾಗಿತ್ತು. ಆ ಪ್ರಕಾರ ಸೆಪ್ಟೆಂಬರ್ 30ರಂದು ಅಯೋಧ್ಯೆಯನ್ನು ತಲುಪಬೇಕಾಗಿತ್ತು. ಆದರೆ ಬಿಹಾರದಲ್ಲಿ ಆಡ್ವಾಣಿಯವರನ್ನು ಬಂಧಿಸುವ ಮೂಲಕ ರಥಯಾತ್ರೆ ಅಂತ್ಯವಾದರೂ ಆಡ್ವಾಣಿ ಪ್ರಭಾವ ಹೆಚ್ಚಿತು. ಆ ಬಳಿಕ ‘ಜನಾದೇಶ ಯಾತ್ರೆ’ (1993) ಆರಂಭಿಸಿ ರಾಜಕೀಯದಲ್ಲಿನ ಅಧರ್ಮ ತೊಲಗಬೇಕೇ ಹೊರತು ಧರ್ಮವಲ್ಲ ಎಂದು ಘೋಷಿಸಿದರು. 1997ರಲ್ಲಿ ದೇಶ ಸ್ವತಂತ್ರವಾದ ಐವತ್ತನೇ ವರ್ಷದ ಪ್ರಯುಕ್ತ ಸ್ವರ್ಣಜಯಂತಿ ರಥಯಾತ್ರೆ ಕೈಗೊಂಡರು. ಈ ಯಾತ್ರೆಯ 59 ದಿನದಲ್ಲಿ 15,000 ಕಿಲೋಮೀಟರ್ ಕ್ರಮಿಸಿದರು. ಬಿಜೆಪಿಯ ಅಂದಾಜಿನ ಪ್ರಕಾರ ಈ ಯಾತ್ರೆಯಲ್ಲಿ ಭಾಗವಹಿಸಿದ ಜನರ ಸಂಖ್ಯೆ 2 ಕೋಟಿಗಿಂತಲೂ ಹೆಚ್ಚು. 2004ರ ಮಾರ್ಚ್- ಏಪ್ರಿಲ್​ನಲ್ಲಿ ಭಾರತ ಉದಯ ಯಾತ್ರೆ, 2006ರ ಏಪ್ರಿಲ್​ನಲ್ಲಿ ಭಾರತ ಸುರಕ್ಷಾ ಯಾತ್ರೆ, 2011ರ ಅಕ್ಟೋಬರ್-ನವೆಂಬರ್​ನಲ್ಲಿ ಜನಚೇತನಾ ಯಾತ್ರ್ರೆ ಕೈಗೊಂಡರು.

 

‘ಮೈ ಕಂಟ್ರಿ ಮೈ ಲೈಫ್’ ಇದು ಎಲ್.ಕೆ. ಆಡ್ವಾಣಿ ಆತ್ಮಕಥನ. 1040 ಪುಟಗಳ ಈ ಪುಸ್ತಕದಲ್ಲಿ ಆಡ್ವಾಣಿ ತಮ್ಮ ಬಾಲ್ಯದಿಂದ ರಾಜಕೀಯ ಜೀವನ ಏಳು-ಬೀಳುಗಳವರೆಗೆ ವಿವರಿಸಿದ್ದಾರೆ. ಈವರೆಗೆ 10 ಲಕ್ಷ ಪ್ರತಿಗಳು ಮಾರಾಟವಾಗಿವೆ ಎಂದು ಪುಸ್ತಕದ ವೆಬ್​ಸೈಟ್​ನಲ್ಲಿ ಹೇಳಲಾಗಿದೆ.

ಸುದೀರ್ಘ ರಾಜಕೀಯ ಅನುಭವದ, ರಾಜನೀತಿಯಲ್ಲಿ ಮೌಲ್ಯ, ಆದರ್ಶಗಳ ಪಥದಲ್ಲಿ ಸಾಗಿ ಹಲವು ಬದಲಾವಣೆಗಳನ್ನು ಸಾಕಾರಗೊಳಿಸಿದವರು ಲಾಲಕೃಷ್ಣ ಆಡ್ವಾಣಿ. ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ, ಹಲವು ರಥಯಾತ್ರೆಗಳ ಮೂಲಕ ಸಂಚಲನ ಮೂಡಿಸಿದ ಅವರಿಗೆ ಇಂದು 90ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ನಿಮಿತ್ತ ಅವರ ಬದುಕಿನ ಪ್ರಮುಖ ಘಟನಾವಳಿಗಳ ಮಾಹಿತಿ ಇಲ್ಲಿದೆ.

Leave a Response