ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ಬೋಗಸ್ ಬಜೆಟ್ ನೀಡುವ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಬಜೆಟ್ ಮಂಡನೆಯುದ್ದಕ್ಕೂ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿತು.
ಬಿಬಿಎಂಪಿಯ ಆದಾಯ 5 ಸಾವಿರ ಕೋಟಿಗಳಷ್ಟಿದ್ದರೆ ಆಡಳಿತ ಪಕ್ಷ 10 ಸಾವಿರ ಕೋಟಿ ರೂ. ಬಜೆಟ್ ಮಂಡಿಸುವ ಮೂಲಕ ನಾಗರಿಕರ ದಿಕ್ಕು ತಪ್ಪಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರವೇ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ದೂರಿದರು.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಬಜೆಟ ಮಂಡನೆ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ವಿರುದ್ಧ ನಿರಂತರ ಘೋಷಣೆಗೆ ಮುಂದಾದರು.
ಬಿಜೆಪಿಯವರ ಧಿಕ್ಕಾರ ಘೋಷಣೆಯ ನಡುವೆಯೂ ಹೇಮಲತಾ ಗೋಪಾಲಯ್ಯ ಅವರು ಬಜೆಟ್ ಮಂಡನೆ ಮುಂದುವರೆಸಿದರು.