ಪುತ್ತೂರು: ವಿದ್ಯಾರ್ಥಿಗಳು ಯೋಚಿಸಿ ಕಾರ್ಯವನ್ನು ಕೈಗೊಳ್ಳಬೇಕು. ಇದರಿಂದ ಸ್ಪರ್ಧೆ ಮತ್ತು ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಪುತ್ತೂರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗಗಳಾದ ಎಂ.ಕಾಂ, ಎಂಎಸ್ಸಿ ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗಗಳ ಆಶ್ರಯದಲ್ಲಿ ಬುಧವಾರ ಕಾಲೇಜಿನ ನೇತಾಜಿ ಸಭಾಂಗಣದಲ್ಲಿ ನಡೆದ ಒಂದು ದಿನದ ಅಂತರ್ ಕಾಲೇಜು “ವಿವೇಕ ಶೋಧನಾ- 2019” ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಗುರಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು. ಆಗ ಯಶಸ್ಸು ನೆರಳಿನ ರೀತಿ ನಮ್ಮ ಹಿಂದೆಯೇ ಹಿಂಬಾಲಿಸುತ್ತದೆ. ಅದೇ ರೀತಿ ಇತರರನ್ನು ನಾವು ಅನುಸರಿಸುವ ಬದಲು, ಎಲ್ಲರಿಂದ ಅವರ ಒಳ್ಳೆಯ ಗುಣವನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜುಗಳು ನಡೆಸುವ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಕೌಶಲ್ಯವನ್ನು ವೃದ್ಧಿಗೊಳಿಸುವ ವೇದಿಕೆಯಾಗಿದೆ. ಇಲ್ಲಿ ಕಲಿತ ಪಾಠದಿಂದ ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಎದುರಿಸುವುದನ್ನು ಕಲಿಯಲು ಈ ಕಾರ್ಯಕ್ರಮ ಪೂರಕ ವೇದಿಕೆ ಎಂದರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ಎಚ್.ಜಿ.ಶ್ರೀಧರ್, ಸ್ನಾತಕೋತ್ತರ ಗಣಿತ ವಿಭಾಗದ ಸಂಯೋಜಕಿ ವಿದ್ಯಾ ಸರಸ್ವತಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಧೀಕ್ಷಿತ್, ಸ್ನಾತಕೋತ್ತರ ಗಣಿತ ವಿಭಾಗದ ವಿದ್ಯಾರ್ಥಿ ನಮೃತಾ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಸುಮಾರು 25 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಸವಿತಾ ಪಿ. ವಂದಿಸಿದರು. ಸ್ನಾತಕೋತ್ತರ ಗಣಿತ ವಿಭಾಗದ ಉಪನ್ಯಾಸಕಿ ಮಾನಸ ಎಂ., ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.