Tuesday, January 21, 2025
ಸುದ್ದಿ

ಟಿಪ್ಪು ಜಯಂತಿ; ದಕ್ಷಿಣಕನ್ನಡ, ಕೊಡಗು ಬೂದಿ ಮುಚ್ಚಿದ ಕೆಂಡ.

ಬೆಂಗಳೂರು : ಸಾಕಷ್ಟು ವಿರೋಧದ ಮಧ್ಯೆ ರಾಜ್ಯಾದ್ಯಂತ ಇಂದು ಟಿಪ್ಪು ಜಯಂತಿ ನಡೆಯುತ್ತಿದೆ. ಶಕ್ತಿ ಕೇಂದ್ರ ವಿಧಾನಸೌಧ ಸಹಿತ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಟಿಪ್ಪು ಜಯಂತಿ ವಿರೋಧಿಸಿ ಹಿಂದೂಪರ ಸಂಘಟನೆಗಳು ಸಹಿತ ಹಲವು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಇಂದು ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಈ ವೇಳೆ ಯಾವುದೇ ಸಮಾವೇಶ, ಪಾದಯಾತ್ರೆ, ಮೆರವಣಿಗೆ ನಡೆಸುವಂತಿಲ್ಲ. ಅಲ್ಲದೆ, ಟಿಪ್ಪು ಜಯಂತಿ ವಿರುದ್ಧ ಹೋರಾಟಕ್ಕೂ ಅವಕಾಶ ನೀಡಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಟಿಪ್ಪು ಜಯಂತಿ ವಿರೋಧಿಸಿ ಮಡಿಕೇರಿಯಲ್ಲಿ ಹಿಂದೂಪರ ಸಂಘಟನೆಗಳು, ಕೊಡವ ಸಮಾಜ ಸಹಿತ ಹಲವು ಸಂಘ-ಸಂಸ್ಥೆಗಳು ಕೊಡಗು ಬಂದ್‌’ಗೆ ಕರೆ ನೀಡಿವೆ. ಇನ್ನೊಂದೆಡೆ ಕೊಡಗು, ದಕ್ಷಿಣ ಕನ್ನಡ, ಚಿತ್ರದುರ್ಗ ಸಹಿತ ಕೆಲವು ಜಿಲ್ಲೆಗಳಲ್ಲಿ ಪ್ರತಿಭಟನೆಗೂ ಕರೆ ನೀಡಲಾಗಿದೆ. ಮಡಿಕೇರಿಯ ಕೋಟೆ ವಿಧಾನ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಗುರುವಾರ ಮಧ್ಯರಾತ್ರಿಯಿಂದ ಶನಿವಾರ ಬೆಳಗ್ಗೆವರೆಗೆ ಮದ್ಯಮಾರಾಟ ನಿಷೇಧಿಸಲಾಗಿದೆ. ಮಡಿಕೇರಿಯ 10 ಚೆಕ್ ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿದೆ. 27 ಡಿಎಆರ್ ತುಕಡಿ, 15 ಕೆಎಸ್‌’ಆರ್‌’ಪಿ ತುಕಡಿಗಳು ಹಾಗೂ ಕೊಯಮತ್ತೂರಿನ ಒಂದು ರಾಪಿಡ್ ಆಕ್ಷನ್ ಫೋರ್ಸ್ ನಿಯೋಜಿಸಲಾಗಿದೆ. ಇನ್ನೊಂದೆಡೆ ಕರಾಳ ದಿನಾಚರಣೆ ಜೊತೆಗೆ ಕೊಡಗು ಬಂದ್‌’ಗೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಿಗದಿತ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಶಾಸಕರಾದ ಅಪ್ಪಚ್ಚು ರಂಜನ್, ಶಾಸಕರಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಚೆಕ್ ಪೋಸ್ಟ್’ಗಳಲ್ಲಿ ವಿಶೇಷ ತನಿಖೆ ಹಾಗೂ ವಿಚಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ನಸುಕಿನ 6 ಗಂಟೆವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response