ಪುತ್ತೂರು: ಜೈವಿಕ ಉತ್ಪನ್ನದ ಶಕ್ತಿಯು ಶೇಕಡ ನೂರರಷ್ಟಿದೆ. ಇದರಿಂದ ಕೃಷಿಯಲ್ಲಿ ಜೈವಿಕ ಗೊಬ್ಬರನ್ನು ಬಳಸುವುದರಿಂದ ಅಧಿಕ ಇಳುವರಿ ಗಳಿಸಲು ಸಾಧ್ಯ. ಆದರೆ ಯಂತ್ರಗಳ ಶಕ್ತಿ ಕೇವಲ ಅರ್ಧದಷ್ಟು ಮಾತ್ರ. ಆದ್ದರಿಂದ ನಮ್ಮ ಕೈಗಳೇ ನಮ್ಮ ಯಂತ್ರವಾಗಬೇಕು. ಕಷಾಯದ ಮದ್ದು, ಸೊಪ್ಪು, ತರಕಾರಿಗಳು, ನರ್ಸರಿಯ ಗಿಡಗಳು ಮತ್ತು ವಿವಿಧ ರೀತಿಯ ಬೀಜಗಳನ್ನು ಮುಖ್ಯ ಕೃಷಿ ಜೊತೆಗೆ ಬೆಳೆಯಿರಿ. ಆಗ ನಮ್ಮ ಕೃಷಿಯ ಮೌಲ್ಯವರ್ಧನೆಯನ್ನು ಹೆಚ್ಚಿಸಬಹುದು ಎಂದು ಮೈಸೂರಿನ ಎ.ಪಿ.ಚಂದ್ರಶೇಖರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ನಡೆಯುತ್ತಿರುವ ಕೃಷಿಯಂತ್ರ ಮೇಳ 2019, ಕನಸಿನ ಮನೆ-ಹೈನುಗಾರಿಕೆಯ ಕೃಷಿ-ಖುಷಿ ವಿಚಾರಗೋಷ್ಠಿಯ “ಕೃಷಿ ಮೌಲ್ಯವರ್ಧಕರಿವರು” ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬರಡು ಭೂಮಿಯಲ್ಲಿ ಹಸಿರ ಕೃಷಿಯನ್ನು ಮಾಡುವ ಸವಾಲನ್ನು ಎದುರಿಸಿ ಅದರಲ್ಲಿ ಯಶಸ್ಸನ್ನು ಪಡೆದು ಕೃಷಿಯಲ್ಲಿ ಮುಂದುವರೆದಿದ್ದೇನೆ ಎಂದ ಅವರು, ಮೌಲ್ಯವರ್ಧನೆ ಎನ್ನುವುದು ತುಂಬಾ ಮೌಲ್ಯಯುತವಾಗಿದೆ. ಅಡಿಕೆ ಕೃಷಿಯೋಂದನ್ನೇ ಮಾಡದೆ ಆ ತೋಟದಲ್ಲೇ ಬೇರೆ ಕೃಷಿಯನ್ನು ಮಾಡಿ ಯಶಸ್ಸನ್ನು ಗಳಿಸಬಹುದು. ಸಸ್ಯಗಳ ಮರುಬಳಕೆ ಅಂದರೆ ಗೊಬ್ಬರಕ್ಕೆ ಸಸ್ಯಗಳೆ ಬೇಕು ಇದನ್ನೇ ಸಾವಯವ ಅಥವಾ ಜೈವಿಕ ಗೊಬ್ಬರ ಎನ್ನುತ್ತೇವೆ ಇದೇ ಕೃಷಿಯ ಮೌಲ್ಯವರ್ಧನೆ ಎಂದರು.
ಸಂಪನ್ಮೂಲ ವ್ಯಕ್ತಿ ಸನ್ನಿ ಸೆಬಾಸ್ಟಿಯನ್ ಮೈಸೂರು ಅವರು ಮಾತನಾಡಿ, ಈಗಿನ ಕೃಷಿ ವಿಧಾನದಲ್ಲಿ ಬದಲಾವಣೆ ಅಗತ್ಯ. ಜಮೀನಿನಲ್ಲಿ ಹಲವು ರೀತಿಯ ಕೃಷಿ ಬೆಳೆ ಬೆಳೆಯುವುದರಿಂದ ವರ್ಷವಿಡೀ ಇಳುವರಿಯನ್ನು ಪಡೆಯಲು ಸಾಧ್ಯ. ಒಂದೇ ಕೃಷಿಯನ್ನು ಬೆಳೆಯುವುದರಿಂದ ತೋಟದಲ್ಲಿ ಕಳೆಯೂ ಹೆಚ್ಚಾಗುತ್ತದೆ ಹಾಗಾಗಿ ಇದನ್ನು ತಪ್ಪಿಲು ಹಲವು ಕೃಷಿಯನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾಧ್ಯ ಎಂದರು.
ತರಕಾರಿಗಳನ್ನು ಬೆಳೆಸಲು ರಸಾಯನದ ಬಳಕೆಯಿಂದ ಮೊದಲು ಉತ್ತಮ ಫಸಲು ಬಂತು. ಆದರೆ ಆ ಬಳಿಕ ನಿಧಾನವಾಗಿ ಫಸಲು ಇಲ್ಲದಿರುವುದು ಕಂಡು ಬಳಸುತ್ತಿದ್ದ ಎಲ್ಲ ರಾಸಾಯನಿಕ ವಸ್ತುಗಳನ್ನು ನಿಲ್ಲಿಸಿ ಜೈವಿಕ ಗೊಬ್ಬರವನ್ನು ಹಾಕಿ ಕೃಷಿಯನ್ನು ವೃದ್ಧಿಸಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಇದ್ದ ಜಮೀನಿನಲ್ಲಿ ತರಕಾರಿ, ತೆಂಗು, ಹಣ್ಣುಗಳ ಗಿಡಗಳನ್ನು ಬೆಳೆಯುವುದು ಸೂಕ್ತ. ಹೀಗೆ ಕೃಷಿ ಎಂದರೆ ಕೇವಲ ಒಂದು ಬೆಳೆಗೆ ಸೀಮಿತವಲ್ಲ. ಇತರ ಸಸಿಗಳನ್ನು ಬೆಳೆದು ಮಣ್ಣಿನ ಫಲವತ್ತತೆಯನ್ನು ಕಾಪಾಡುವುದೂ ಕೂಡ ಕೃಷಿಕ ಕರ್ತವ್ಯ ಎಂದರು.
ಕೃಷಿಕರು ಬೆಳೆದ ಉತ್ಪನ್ನಗಳನ್ನು ಹೆಚ್ಚು ಬೇಡಿಕೆ ಹಾಗೂ ಅಧಿಕ ಬೆಲೆ ಇರುವಲ್ಲಿಗೆ ಮಾರಾಟ ಮಾಡುವುದು ಸೂಕ್ತ. ಏಕೆಂದರೆ ಉತ್ಪನ್ನಗಳು ಅದರ ಗುಣಮಟ್ಟದ ಮೇಲೆ ನಿರ್ಧಾರವಾಗುತ್ತದೆ. ಹಾಗಾಗಿ ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಯುವುದರಿಂದ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಶಿರಸಿಯ ವಿನುತಾ ಹೆಗ್ಗಡೆ ಮಾತನಾಡಿ, ಮಹಿಳೆಯರು ಮನೆಯಲ್ಲಿ ಕುಳಿತುಕೊಂಡು ಕೇವಲ ಅಡುಗೆ ಮನೆಗೆ ಸೀಮಿತವಾಗಿರಬಾರದು ಬದಲಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿಯಾಗಬಹುದು ಎಂದರು.
ಹಲಸಿನ ಹಣ್ಣಿನ ಚಾಕಲೇಟನ್ನು ತಯಾರಿಸಿ ಬಳಿಕ ಮಾರಾಟ ಮಾಡಿ ಹೊಸ ಉತ್ಪನ್ನವನನು ಪರಿಚಯಿಸಿದೆ. ಆದರೆ ಬಳಿಕ ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಇಂದು ಟನ್‍ಗಟ್ಟಲೆ ಚಾಕಲೇಟನ್ ಅನ್ನು ಮಾರಾಟ ಮಾಡಿತ್ತಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ವಿಶೇಷ ಸಂಚಿಕೆ ಬಿಡುಗಡೆ
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ರಚಿಸಿರುವ ಕೃಷಿ ಯಂತ್ರ ಮೇಳದ ವಿಶೇಷ ಸಂಚಿಕೆ “ವಿಕಸನ” ಪತ್ರಿಕೆಯನ್ನುಉಪನ್ಯಾಸಕ, ಕೃಷಿ ಅಂಕಣಗಾರ ಡಾ.ನರೇಂದ್ರರೈ ದೇರ್ಲ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿಕರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ನರೇಂದ್ರ ಪದವಿಪೂರ್ವ ಕಾಲೇಜಿನ ಅಧ್ಯಕ್ಷೆ ರೂಪಲೇಖ, ನರೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಉಪಸ್ಥಿತರಿದ್ದರು. ಡಾ. ನರೇಂದ್ರರೈ ದೇರ್ಲ ಕಾರ್ಯಕ್ರಮವನ್ನು ನಿರೂಪಿಸಿದರು.