ಪುತ್ತೂರು: ಕೃಷಿಯಂತ್ರ ಮೇಳದ ಎರಡನೇ ದಿನವಾದ ಭಾನುವಾರ ಹಲವು ವಿಭಿನ್ನ ಕಾರ್ಯಕ್ರಮಗಳಿಗೆ ವಿವೇಕಾನಂದ ಕ್ರೀಡಾಂಗಣ ಸಾಕ್ಷಿಯಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯ ತನ್ನ ವರ್ಷಾಚರಣೆಯ ಪ್ರಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈ ಸಂದರ್ಭ ವಿವೇಕಾನಂದ ಮಹಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ನವೀನ್ ಕೃಷ್ಣ ಮುರ ನಿರ್ದೇಶನದ, ಸಂಚಾರಿ ವಿಜಯ್ ಅಭಿನಯಿಸಿರುವ ‘ಮೇಲೊಬ್ಬ ಮಾಯಾವಿ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಇದೇ ಪ್ರಥಮಬಾರಿಗೆ ಕೃಷಿ ಯಂತ್ರಮೇಳದ ವೇದಿಕೆಯಲ್ಲಿ, ಈ ಸಿನಿಮಾ ಹಾಡಿನ ದ್ವನಿ ಸುರುಳಿ ಬಿಡುಗಡೆಯಾಯಿತು.
‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ಸಂಚಾರಿ ವಿಜಯ್ ಇದೀಗ ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬರಲ್ಲೂ ಒಬ್ಬ ಮಾಯಾವಿ ಇರುತ್ತಾನೆ. ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಕಲಾವಿದರು ಜೀವ ತುಂಬಿದ್ದಾರೆ.
ಈ ಚಿತ್ರದಲ್ಲಿ ಕೆಲವು ಪಾತ್ರಗಳು ದ್ವಂದ್ವ ಪಾತ್ರಗಳಾಗಿ ಕಾಣಿಸಿಕೊಳ್ಳಲಿದೆ. ನೈಜ ಸಂಗತಿಯನ್ನೇ ಆರಿಸಿಕೊಂಡ ಮೇಲೊಬ್ಬ ಮಾಯಾವಿ ಚಿತ್ರ ಇದೀಗ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ವಿವೇಕಾನಂದ ಇಂಜಿನಿಯರಿಂಗ್ ಮತ್ಥು ಪಾಲಿಟೆಕ್ನಿಕ್ ಕಾಲೇಜಿನ ಪುತ್ತೂರಿನ ಆಸುಪಾಸಿನಲ್ಲಿ ಚಿತ್ರೀಕರಣಗೊಂಡ ‘ಮೇಲೊಬ್ಬ ಮಾಯಾವಿ’ ಇದೀಗ ಬಿಡುಗಡೆಯ ಹಂತದಲ್ಲಿದೆ. ಧ್ವನಿಸುರುಳಿ ಬಿಡುಗಡೆಯ ಸಂದರ್ಭದಲ್ಲಿ ಹಿರಿಯ ನಟ ಮಂಗೇಶ್ ಭಟ್ ಮಾತನಾಡಿ ಈ ಚಿತ್ರ ಅತ್ಯುತ್ತಮ ಚಿತ್ರವಾಗಿದ್ದು, ಕುಟುಂಬ ಸಮೇತ ನೋಡಬಹುದಾಗಿದೆ.
ಈ ಸಿನಿಮಾಕ್ಕೆ ಪ್ರೇಕ್ಷಕರ ಸಹಕಾರ ಮುಖ್ಯವಾಗಿ ಬೇಕಾಗಿದೆ. ಈ ಸಹಕಾರವು ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನೆಮಾಗಳನ್ನು ಚಿತ್ರರಂಗಕ್ಕೆ ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನುಡಿದರು.
ಈ ಚಿತ್ರದ ನಿರ್ದೇಶಕ, ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ನವೀನ್ ಕೃಷ್ಣ ಮುರ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ಚಿತ್ರ ನಿರ್ಮಾಣದ ಉದ್ದೇಶದ ಕುರಿತಾಗಿ ಮಾತನಾಡಿದರು.
ಈ ಸಂದರ್ಭ ‘ಮೇಲೊಬ್ಬ ಮಾಯಾವಿ ಚಿತ್ರದ’ ನಾಲ್ಕು ವೀಡಿಯೋ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಸಿನೆಮಾದ ಇಡಿಯ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಯಿತು.
ಈ ಸಂದರ್ಭ ಚಲನಚಿತ್ರ ನಿರ್ಮಾಪಕ ಭರತ್ ಪುತ್ತೂರು ಉಪಸ್ಥಿತರಿದ್ದರು. ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮಖ್ಯಸ್ಥ, ಐಕ್ಯೂಎಸಿ ಸಂಯೋಜಕ ಡಾ. ಹೆಚ್.ಜಿ. ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.