ಭಾರತೀಯ ವಾಯುಸೇನೆಯು ಭಯೋತ್ಪಾದಕ ನೆಲೆಯ ಮೇಲೆ ೧೦೦೦ ಕೆಜಿ ಬಾಂಬ್ ಅನ್ನು ಎಸೆದಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ನಾಲ್ಕು ಕಡೆ ದಾಳಿ ನಡೆದಿದ್ದು, ದಾಳಿಯಲ್ಲಿ ಸುಮಾರು ೨೦೦-೩೦೦ ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಇದೀಗ ಭಾರತ ಪಾಕಿಸ್ಧಾನ ನಡುವೆ ಉದ್ಧಿಗ್ನ ಪರಿಸ್ಧತಿ ನಿರ್ಮಾಣವಾಗಿದೆ. ಇದರ ನಡುವೆ ಪಾಕಿಸ್ತಾನ ಸಶಸ್ತ್ರ ಪಡೆಗಳು ಸೆರೆಹಿಡಿದಿರುವ ಭಾರತದ ಯುದ್ಧ ವಿಮಾನ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಇಮ್ರಾನ್ ಖಾನ್ ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಖ್ಯಾತ ಲೇಖಕಿ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೊ ಅವರ ಮೊಮ್ಮಗಳು ಫಾತಿಮಾ ಭುಟ್ಟೊ ಆಗ್ರಹಿಸಿದ್ದಾರೆ.
“ನಮ್ಮ ದೇಶ ಬಂಧಿಸಿರುವ ಭಾರತೀಯ ಪೈಲಟ್ ಅನ್ನು ಶಾಂತಿ, ಮಾನವೀಯತೆ ಮತ್ತು ಘನತೆಯ ಬಗೆಗಿನ ಬದ್ಧತೆ ಹಿನ್ನೆಲೆಯಲ್ಲಿ ತಕ್ಷಣ ಬಿಡುಗಡೆ ಮಾಡುವಂತೆ ನಾನು ಹಾಗೂ ಹಲವು ಯುವ ಪಾಕಿಸ್ತಾನಿಗಳು ಆಗ್ರಹಿಸಿದ್ದೇವೆ” ಎಂದು ಭುಟ್ಟೊ ನ್ಯೂಯಾರ್ಕ್ ಟೈಮ್ಸ್ನಲ್ಲಿ ಬರೆದ ಲೇಖನದಲ್ಲಿ ಫಾತಿಮಾ ಭುಟ್ಟೊ ತಿಳಿಸಿದ್ದಾರೆ.
“ನಾವು ಯುದ್ಧದ ಅವಧಿಯಲ್ಲಿ ಜೀವನ ಸಾಗಿಸಿದ್ದೇವೆ. ಪಾಕಿಸ್ತಾನಿ ಸೈನಿಕರು ಸಾಯುವುದನ್ನು ನಾವು ಬಯಸುವುದಿಲ್ಲ. ಅಂತೆಯೇ ಭಾರತೀಯ ಸೈನಿಕರೂ ಕೂಡಾ. ನಾವು ಅನಾಥರ ಉಪಖಂಡವಾಗಬಾರದು” ಎಂದು ಮಾಜಿ ಪ್ರಧಾನಿ ಬೇನಝೀರ್ ಭುಟ್ಟೊ ಅವರ ಸೊಸೆ ಹೇಳಿದ್ದಾರೆ.
“ನಮ್ಮ ಪೀಳಿಗೆಯ ಪಾಕಿಸ್ತಾನಿಗಳು ಮಾತನಾಡುವ ಹಕ್ಕಿಗಾಗಿ ಹೋರಾಡಿದೆವು; ಶಾಂತಿಗಾಗಿ ನಾವು ಧ್ವನಿ ಎತ್ತುವುದಕ್ಕೆ ಹೆದರುವುದಿಲ್ಲ” ಎಂದು ಝುಲ್ಫಿಕರ್ ಅವರ ಮಗ ಮುರ್ತಾಝಾ ಭುಟ್ಟೊ ಅವರ ಪುತ್ರಿಯಾಗಿರುವ ಫಾತಿಮಾ ಹೇಳಿದ್ದಾರೆ. “ಪಾಕಿಸ್ತಾನದ ಇತ್ತೀಚಿನ ಇತಿಹಾಸ ರಕ್ತಸಿಕ್ತವಾಗಿದೆ. ಇದರಿಂದ ಹೆಚ್ಚು ತೊಂದರೆಗೀಡಾದವರು ಸ್ವಂತ ದೇಶದ ನಾಗರಿಕರು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಮಿಲಿಟರಿ ಸರ್ವಾಧಿಕಾರಿ ಆಳ್ವಿಕೆ, ಭಯೋತ್ಪಾದನೆ ಹಾಗೂ ಅನಿಶ್ಚಿತತೆಯ ಅನುಭವ ಇರುವ ನಮ್ಮ ಪೀಳಿಗೆ ಯಾವುದೇ ಬಗೆಯ ಯುದ್ಧ ಅಥವಾ ಆಡಂಬರದ ದೇಶಭಕ್ತಿಯ ದಾಹವನ್ನೂ ಹೊಂದಿಲ್ಲ; ಅದನ್ನು ಸಹಿಸುವುದೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮಂತೆಯೇ ದೊಡ್ಡ ಸಂಖ್ಯೆಯ ಯುವ ಪಾಕಿಸ್ತಾನಿಗಳು ಸಂಘರ್ಷದ ಸ್ಥಿತಿಯನ್ನು ಬಯಸುವುದಿಲ್ಲ ಎಂದು ಫಾತಿಮಾ ಭುಟ್ಟೊ ಲೇಖನದಲ್ಲಿ ಬರೆದಿದ್ದಾರೆ.