ಅಬುಧಾಬಿ: “ಭಯೋತ್ಪಾದನೆಯಿಂದ ವಿಶ್ವದಲ್ಲಿ ಹಿಂಸೆ ಹೆಚ್ಚಾಗುತ್ತಿದೆ. ಅಮಾಯಕ ಜನರ ಜೀವಕ್ಕೆ ಹಾನಿಯಾಗುತ್ತಿದೆ. ಇಸ್ಲಾಂ ಧರ್ಮದಲ್ಲಿ ಶಾಂತಿ ಹೇಳಿಕೊಡಲಾಗುತ್ತದೆ. ಕೆಲವು ದೇಶ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ. ಭಯೋತ್ಪಾದನೆ ಬೆಂಬಲಿಸುವ ದೇಶವನ್ನು ಏಕಾಂಗಿಯಾಗಿಸಬೇಕು. ಅದರ ಬಣ್ಣ ಬಯಲು ಮಾಡಬೇಕು” ಎಂದು ಭಾರತದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಪಾಕಿಸ್ತಾನ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅಬುಧಾಬಿಯಲ್ಲಿ ಶುಕ್ರವಾರ ನಡೆದ 46ನೇ ಆವೃತ್ತಿಯ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾಗವಹಿಸಿದ್ದ ಸುಶ್ಮಾ ಮಾತನಾಡುತ್ತಿದ್ದರು.
ಪಾಕಿಸ್ತಾನ ಈ ಸಮಾವೇಶವನ್ನು ಬಹಿಷ್ಕರಿಸಿದೆ. ಸಮಾವೇಶದಲ್ಲಿ ಭಾರತದ ವಿದೇಶಾಂಗ ಸಚಿವೆಯನ್ನು ಅತಿಥಿಯಾಗಿ ಆಹ್ವಾನಿಸಿದರೆ ತಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಘೋಷಿಸಿತ್ತು.