Recent Posts

Monday, January 20, 2025
ಸುದ್ದಿ

ಕೇವಲ ಪದವಿ ಪಡೆಯುವುದೇ ಶಿಕ್ಷಣವಲ್ಲ: ಕುಲಸಚಿವ ಪ್ರೊ.ಎ.ಎಂ.ಖಾನ್ – ಕಹಳೆ ನ್ಯೂಸ್

ಪುತ್ತೂರು: ನಮ್ಮ ಹಿರಿಯರು ನಮಗೆ ಮಾಡಿದ ಮಾರ್ಗದರ್ಶನವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ಎಡವಿದ್ದೇವೆ. ವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳುವುದರ ಬಗೆಗೆ ವಿದ್ಯಾರ್ಥಿ ಸಮುದಾಯ ಕಾರ್ಯಪ್ರವೃತ್ತವಾಗಬೇಕು. ನಾವು ಏನು ಯೋಚನೆ ಮಾಡುತ್ತೇವೆ ಎನ್ನುವುದರ ಆಧಾರದ ಮೇಲೆ ಭವಿಷ್ಯ ಅಡಕವಾಗಿರುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಎ.ಎಂ.ಖಾನ್ ಹೇಳಿದರು.

ಅವರು ಶುಕ್ರವಾರ ನಡೆದ ಇಲ್ಲಿನ ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ತಂತ್ರಜ್ಞಾನ ನಮಗೆ ಅಡಚಣೆಯಾಗಲಾರಂಭಿಸಿದೆ. ಮುಕ್ತವಾದ ಮಾತು, ನಗುವಿಗೆ ಇಂದು ನಮ್ಮಲ್ಲಿ ಜಾಗವಿಲ್ಲದಿರುವುದು ಆತಂಕಕಾರಿ ವಿಚಾರ.

ಜಾಹೀರಾತು
ಜಾಹೀರಾತು
ಜಾಹೀರಾತು

ಓದುವ ಹವ್ಯಾಸವೂ ನಮ್ಮಿಂದ ದೂರವಾಗುತ್ತಿದೆ. ಬೆರೆಯುವ ಗುಣವೂ ಕಾಣೆಯಾಗಿದೆ. ಇವೆಲ್ಲದರ ನಕಾರಾತ್ಮಕ ಪರಿಣಾಮ ನಮ್ಮ ವ್ಯಕ್ತಿತ್ವದ ಮೇಲಾಗುತ್ತಿದೆ. ಖುಷಿಯಿಂದ ಮಾತನಾಡುವ, ಚರ್ಚಿಸುವ ನಡವಳಿಕೆ ನಮ್ಮದಾಗಿದ್ದಾಗ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನಿಂದ ಸಾಧ್ಯ ಎಂಬ ಭಾವನೆ ನಮ್ಮೊಳಗೆ ಒಡಮೂಡಬೇಕು. ಅದಕ್ಕನುಗುಣವಾಗಿ ಕಾರ್ಯನಿರ್ವಹಿಸಬೇಕು. ಕೇವಲ ಪದವಿ ಪಡೆಯುವುದೇ ಶಿಕ್ಷಣವಲ್ಲ. ಸರಿ ತಪ್ಪುಗಳ ನಡುವಣ ವ್ಯತ್ಯಾಸ ಗುರುತಿಸುವಲ್ಲಿ ನಾವು ಸಫಲವಾದಾಗ ಮಾತ್ರ ಶಿಕ್ಷಿತರೆನಿಸಿಕೊಳ್ಳುತ್ತೇವೆ ಎಂದರಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದಡಿಯ ಉತ್ಕೃಷ್ಟ ಕಾಲೇಜುಗಳಲ್ಲಿ ವಿವೇಕಾನಂದ ಕಾಲೇಜು ಕೂಡ ಒಂದು. ನ್ಯಾಕ್‌ನಿಂದ ಮೆಂಟರ್ ಕಾಲೇಜು ಎಂದು ಗುರುತಿಸಿಕೊಂಡಿರುವುದು ಈ ಕಾಲೇಜಿನ ಶ್ರೇಷ್ಟತೆಯನ್ನು ಸಾರುತ್ತದೆ ಎಂದು ಶ್ಲಾಘಿಸಿದರು.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮಾಡಬೇಕಾದ ಅಗತ್ಯವಿದೆ. ಯಾಕೆಂದರೆ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ನಾವು ಕ್ರಮೇಣ ಮರೆಯುತ್ತಿದ್ದೇವೆ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಶ್ರಮವಹಿಸಬೇಕಿದೆ. ಸ್ವಾಮಿ ವಿವೇಕಾನಂದರು ಕೇಳಿದ ಸಮರ್ಥ ನೂರು ವ್ಯಕ್ತಿಗಳನ್ನು ಬಹುಷಃ ನಮ್ಮಿಂದ ಇನ್ನೂ ಕೊಡುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಆ ಬೇಡಿಕೆಯನ್ನು ಈಡೇರಿಸುವ ವ್ಯಕ್ತಿಗಳ ಸೃಷ್ಟಿ ವಿದ್ಯಾಸಂಸ್ಥೆಗಳಲ್ಲಿ ಆಗಬೇಕಿದೆ ಎಂದು ಕರೆ ನೀಡಿದರು.

ಮತ್ತೋರ್ವ ಅತಿಥಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಕಾಲೇಜಿನ ಹಿರಿಯ ವಿದ್ಯಾರ್ಥಿ ತಿಮ್ಮಪ್ಪ ನಾಯ್ಕ್ ಮಾತನಾಡಿ ವಿದ್ಯಾರ್ಥಿ ಜೀವನ ಅನ್ನುವುದು ಅತ್ಯಂತ ಪ್ರಮುಖ ಘಟ್ಟ. ಪ್ರತಿಯೊಬ್ಬನೂ ಶಿಸ್ತನ್ನು ಅಳವಡಿಕೊಂಡು ಶಿಕ್ಷಣವನ್ನು ಮುಂದುವರೆಸಿದಾಗ ಯಶಸ್ಸು ಸಾಧ್ಯ. ಕಾಲೇಜು ಜೀವನದಲ್ಲಿ ಎಡವಿದರೆ ಮುಂದಿನ ಬದುಕಿನಲ್ಲಿ ಪಶ್ಚಾತ್ತಾಪಪಡಬೇಕಾದೀತು ಎಂದರಲ್ಲದೆ ದೇಶಪ್ರೇಮ ಪ್ರತಿಯೊಬ್ಬನಲ್ಲೂ ಒಡಮೂಡಬೇಕು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ, ವಿವೇಕಾನಂದ ಕಾಲೇಜಿನಲ್ಲಿ ಅತ್ಯುತ್ತಮ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದಾರೆ. ಆ ಕಾರಣದಿಂದಲೇ ಇಲ್ಲಿ ಸಾಕಷ್ಟು ಸಾಧನೆಗಳು ಪ್ರತಿವರ್ಷವೂ ಸಾಧ್ಯವಾಗುತ್ತಿವೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ದೊರೆತ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಪ್ರಜೆಗಳಾಗಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ದೆಹಲಿಯ ರಾಜಪಥ್‌ನ ಈ ಬಾರಿಯ ಪಥ ಸಂಚಲನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಎನ್‌ಸಿಸಿ ವಿಭಾಗದ ವಿದ್ಯಾರ್ಥಿನಿ ಸಾರ್ಜೆಂಟ್ ಪ್ರೀತಿ ಡಿ ಅವರನ್ನು ಗೌರವಿಸಲಾಯಿತು. 2017-18 ನೇ ಶೈಕ್ಷಣಿಕ ಸಾಲಿನಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿನಿಯರಾದ ಶ್ರೇಯಾ ಎಸ್, ರಂಜಿತಾ ಎಂ, ಅನನ್ಯಲಕ್ಷಿ್ಮ ಹಾಗೂ ಸ್ನಾತಕೋತ್ತರ ವಿಭಾಗದ ಸ್ವಾತಿ ಅವರನ್ನು ಸನ್ಮಾನಿಸಲಾಯಿತು. ಎನ್‌ಸಿಸಿ ಸಾಧಕರಾದ ರಮ್ಯಾ ಡಿ ಹಾಗೂ ಭಜನ್ ಅಚಯ್ಯ, ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ಅಜಿತ್, ಶೋಭಿತ್ ಬಿ, ನೌಷದ್ ಉಮ್ಮರ್, ಅಶ್ವಿನಿ, ದಿಶಾ, ನಿಶ್ಮಿತಾ ಎಚ್.ಸಿ, ವೀಕ್ಷಿತಾ ಎನ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ ಭಟ್, ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ಸದಸ್ಯರುಗಳಾದ ಮೋಹನ್ ಕೆ.ಎಸ್, ಅನಂತಕೃಷ್ಣ ನಾಯ್ಕ್, ಕೃಷ್ಣ ನಾಯ್ಕ್ ಕೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೂರ್ಯನಾರಾಯಣ ರಾವ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರೇಖಾ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಿಖಿತ್ ಎಚ್.ಎಲ್, ಕಾರ್ಯದರ್ಶಿ ಸಂಕೇತ್ ಕುಮಾರ್ ಎನ್, ಜತೆ ಕಾರ್ಯದರ್ಶಿ ನೀಮಾ ಎಚ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವಾರ್ಷಿಕ ವರದಿಯನ್ನು ಮಂಡಿಸಿದರು. ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾದ ಅಂತರ್ ಕಾಲೇಜು ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕುಂದಾಪುರದ ಭಂಡಾರ್‌ರ‍್ಸ್ ಕಾಲೇಜು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.

ವಿದ್ಯಾರ್ಥಿನಿಯರಾದ ಸಾಯಿರೂಪ, ಸೃಜನಾ ಹಾಗೂ ವಿದ್ಯಾಶ್ರೀ ಪ್ರಾರ್ಥಿಸಿದರು. ಕಾಲೇಜಿನ ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ವಂದಿಸಿದರು. ಉಪನ್ಯಾಸಕಿಯರಾದ ಡಾ.ಗೀತಾ ಕುಮಾರಿ ಹಾಗೂ ಡಾ.ಮಾನಸ ಎಂ, ಪ್ರೊ.ಶಿವಪ್ರಸಾದ್, ಯತೀಶ್ ಕುಮಾರ್, ಅಂಬಿಕಾ ಕಾರ್ಯಕ್ರಮ ನಿರ್ವಹಿಸಿದರು.

ಹೊಸ ಕೋರ್ಸ್ ಆರಂಭ : 2019-20 ರ ಶೈಕ್ಷಣಿಕ ವರ್ಷದಿಂದ ವಿವೇಕಾನಂದ ಕಾಲೇಜಿನಲ್ಲಿ ನೂತನ ಪದವಿ ವಿಷಯವೊಂದನ್ನು ಆರಂಭಿಸಲಾಗುವುದು. ಬಿ.ಎ ವಿಭಾಗದಲ್ಲಿ ಟ್ರಾವೆಲ್ ಅಂಡ್ ಟೂರಿಸಂ ವಿಷಯ ಅಸ್ತಿತ್ವಕ್ಕೆ ಬರಲಿದೆ. ಇತಿಹಾಸ, ಅರ್ಥಶಾಸ್ತ್ರ ಹಾಗೂ ಟ್ರಾವೆಲ್ ಅಂಡ್ ಟೂರಿಸಂ ಹೀಗೆ ಮೂರು ವಿಷಯ ಜತೆಯಾಗಿರುವ ನೂತನ ಬಿ.ಎ ವಿಷಯ ಮುಂದಿನ ವರ್ಷದಿಂದ ಸೇರಿಕೊಳ್ಳಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಘೋಷಣೆ ಮಾಡಿದರು.