Sunday, November 24, 2024
ಸುದ್ದಿ

ವಿದ್ಯಾರ್ಥಿಗಳು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಿ: ಪ್ರೊ. ಮಂಜುನಾಥ ಪಟ್ಟಾಭಿ – ಕಹಳೆ ನ್ಯೂಸ್

ಪುತ್ತೂರು: ಶಿಕ್ಷಣ ಮತ್ತು ಕಲಿಕೆ ಎನ್ನುವುದು ಪ್ರತಿಯೊಬ್ಬನ ಜೀವಿತಾವಧಿಯಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಅದು ಕಾಲೇಜುಗಳಿಗೆ ಹೋಗಿ ಕಲಿಯಬೇಕೆಂದಿಲ್ಲ. ಇದು ನಾನಾ ರೀತಿಯಲ್ಲಿ ಹಲವು ಸನ್ನಿವೇಶಗಳ ಮೂಲಕ ಕಲಿಯುವ ಪ್ರಸಂಗಗಳು ನಡೆಯುತ್ತವೆ. ಇಂದು ಎಲ್ಲರು ಅಂಕಗಳಿಸುವತ್ತ ಗುರಿ ಇಟ್ಟಿದ್ದೇವೆ, ಬದಲಾಗಿ ಸಾಮಾನ್ಯ ಜ್ಞಾನದ ಮುಖೇನ ಕೌಶಲ್ಯಗಳನ್ನು ಪಡೆದುಕೊಳ್ಳಬೇಕು ಎಂದು ಮಂಗಳೂರು ವಿಶ್ವ ವಿದ್ಯಾಲಯದ ವಸ್ತು ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ಮಂಜುನಾಥ ಪಟ್ಟಾಭಿ ತಿಳಿಸಿದರು.

ಅವರು ಶನಿವಾರ ವಿವೇಕಾನಂದ ಕಾಲೇಜಿನಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಳಿದವನು ಬಾಳಿಯಾನು ಎಂಬ ಗಾದೆಯಂತೆ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ. ಬದುಕಿನ ಕೌಶಲ್ಯವನ್ನು ಪಡೆಯಲು ಶಿಕ್ಷಣ ಸಂಸ್ಥೆಗಳ ಆವಶ್ಯಕತೆ ಇದೆ. ವಿಷಯಗಳನ್ನು ಚೆನ್ನಾಗಿ ಕಲಿತರೆ ಅದೇ ಕೌಶಲ್ಯವನ್ನು ನೀಡುತ್ತದೆ. ವಿದ್ಯಾರ್ಥಿ ಜೀವನದಲ್ಲೇ ಓದಿನ ಬಗೆಗೆ ಹೆಚ್ಚಿನ ಆಸಕ್ತಿಯನ್ನು ಹೆಚ್ಚಿಸಿ. ಏಕೆಂದರೆ ಆನಂತರದಲ್ಲಿ ಓದಲು ಸಮಯ ಸಿಗುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್ ಅಥವಾ ತಂತ್ರಜ್ಞಾನವನ್ನು ಅವಶ್ಯಕ್ಕೆ ತಕ್ಕಷ್ಟು ಬಳಸಿ ಏಕೆಂದರೆ ಸಮಯ ವ್ಯರ್ಥಮಾಡುವ ಸಾಧನವೂ ಇದಾಗಿದೆ. ಹಾಗಾದ ಕಾರಣ ಓದು, ಆಸಕ್ತಿ, ತಾಳ್ಮೆಯನ್ನು ಎಲ್ಲ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಅನುಭವದ ಮಾತುಗಳು ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದೆ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಏಳಿಗೆಗೆ ಹಲವು ಯೋಜನೆ, ಯೋಚನೆಗಳನ್ನು ರೂಪಿಸುವಲ್ಲಿ ಹಿರಿಯ ವಿದ್ಯಾರ್ಥಿಗಳು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕೊಡಮಾಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಡಿ.ಎಸ್ ಭಟ್ ಸಂಸ್ಥೆಯ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಹಿರಿದು. ಹಿಂದೆ ಹಳೆಯ ವಿದ್ಯಾರ್ಥಿಗಳು ಎನ್ನುತ್ತಿದ್ದರು ಆದರೆ ಈಗ ಹಿರಿಯ ವಿದ್ಯಾರ್ಥಿಗಳು ಎಂದು ಹೇಳುವಂತಾಗಿದೆ. ಏಕೆಂದರೆ ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಸ್ಥೆಯ ಬೆಳವಣಿಗೆಗೆ ಇವರ ಪಾತ್ರ ಮುಖ್ಯವಾಗಿದೆ. ಹಾಗೆಯೇ ಸ್ಥಳೀಯ ಹಿರಿಯ ವಿದ್ಯಾರ್ಥಿಗಳು ಕಾಲೇಜಿಗೆ ಯಾವತ್ತೂ ಸಹಕಾರ ನೀಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ತಾಳ್ತಜೆ ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳು ನಡೆಸಿದ ಸಾಧನೆ ಇಂದಿನ ಯುವಕರಿಗೆ ಮಾದರಿಯಾಗಿದೆ. ಮಾತ್ರವಲ್ಲದೆ ಹಿರಿಯ ವಿದ್ಯಾರ್ಥಿಗಳ ಗುಣನಡೆತೆ, ವ್ಯಕ್ತಿತ್ವವನ್ನು ಗುರುತಿಸಿ ಗೌರವಿಸುವ ಕೆಲಸವಾಗಿದೆ. ವಿದ್ಯಾರ್ಥಿಗಳು ಎಲ್ಲವನ್ನು ನಿಷ್ಕಲ್ಮಶ ಮನಸ್ಸಿನಿಂದ ಎಲ್ಲವನ್ನು ಸ್ವೀಕರಿಸಬೇಕು. ಇದು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಗೌರವಾರ್ಪಣೆ
2017-18ನೇ ಶೈಕ್ಷಣಿಕ ಸಾಲಿನಲ್ಲಿ ವಿವಿ ಮಟ್ಟದಲ್ಲಿ ರ್ಯಾಂಕ್ ಗಳಿಸಿದ ಕಾಲೇಜು ವಿದ್ಯಾರ್ಥಿನಿಯರಾದ ಶ್ರೇಯಾ ಎಸ್, ರಂಜಿತಾ ಎಂ., ಅನನ್ಯಲಕ್ಷ್ಮೀ ಹಾಗೂ ಸ್ನಾತಕೋತ್ತರ ವಿಭಾಗದ ಸ್ವಾತಿ ಅವರನ್ನು ಸನ್ಮಾನಿಸಲಾಯಿತು. ದೆಹಲಿಯ ರಾಜಪಥ್‍ನ ಈ ಬಾರಿಯ ಪಥ ಸಂಚಲನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಎನ್‍ಸಿಸಿ ವಿಭಾಗದ ವಿದ್ಯಾರ್ಥಿನಿ ಸಾರ್ಜೆಂಟ್ ಪ್ರೀತಿ ಡಿ. ಅವರನ್ನು ಗೌರವಿಸಲಾಯಿತು.

ಹಿರಿಯ ವಿದ್ಯಾರ್ಥಿಗಳಾದ ಹಾಗೂ ಸಾಧಕರಾದ ರಾಷ್ಟ್ರ ಪ್ರಶಸ್ತಿ ಪುರಸ್ಕತ ಶಿಕ್ಷಕ ಶಂಕರ್ ಸಾರಡ್ಕ, ಎಲ್ ಆ್ಯಂಡ್ ಟಿ ಸಂಸ್ಥೆ ಬೆಂಗಳೂರಿನ ಪ್ರಾಜೆಕ್ಟ್ ಮ್ಯಾನೇಜರ್ ವೆಂಕಟಕೃಷ್ಣಮೂರ್ತಿ ಪಡ್ಡಾಯೂರು, ಚಲನಚಿತ್ರ ನಿರ್ದೇಶಕ ಬಿ. ನವೀನ್ ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಉಪಸ್ಥಿತರಿದ್ದರು.

ಉಪನ್ಯಾಸಕಿ ಸುಕನ್ಯಾ ಮತ್ತು ತಂಡ ಪ್ರಾರ್ಥಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ದೀಕ್ಷಿತ್ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಉಪನ್ಯಾಸಕಿ ಸರಸ್ವತಿ ಸಿ.ಕೆ. ಪ್ರಸ್ತಾವನೆಗೈದರು. ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿದ್ಯಾ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್, ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ, ವಾಣಿಜ್ಯ ವಿಭಾಗದ ಉಪನ್ಯಾಸಕಿ ರವಿಕಲಾ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನರಸಿಂಹ ಭಟ್ ಪ್ರೊ.ಡಿ.ಎಸ್ ಭಟ್ ಬಗೆಗೆ ಅಭಿನಂದನೆ ಮಾತುಗಳನ್ನಾಡಿದರು.