Friday, November 22, 2024
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಮಾಧ್ಯಮ ಹಬ್ಬದ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಪ್ರಸ್ತುತ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಜ್ಞಾನದ ವಿಷಯದಲ್ಲಿ ಮಡಿವಂತಿಕೆ ಮಾಡದೆ ಎಲ್ಲವನ್ನು ಕಲಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯಶಸ್ಸಿಗೆ ಯಾವುದೇ ಸುಲಭದಾರಿಗಳಿಲ್ಲ. ಓದಿನಲ್ಲಿ ಮಡಿವಂತಿಕೆಯನ್ನು ಇಟ್ಟುಕೊಳ್ಳಬಾರದು. ಓದು, ಒಡನಾಟ, ಓಡಾಟ ಎನ್ನುವುದು ಪತ್ರಕರ್ತನಾದವನಿಗೆ ಮುಖ್ಯ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ದಿಗ್ವಿಜಯ ವಾಹಿನಿಯ ನಿರೂಪಕ ರಕ್ಷತ್ ಶೆಟ್ಟಿ ಅಭಿಪ್ರಾಯಪಟ್ಟರು.

ವಿವೇಕಾನಂದ ಮಹಾವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಗಳ ವತಿಯಿಂದ ನಡೆದ “ಮೀಡಿಯಾ ವಿವೇಕ್” ಎಂಬ ರಾಜ್ಯಮಟ್ಟದ ಪ್ರತಿಭಾ ಶೋಧನ ಮಾಧ್ಯಮ ಹಬ್ಬದ ಉದ್ಘಾಟನೆ ನೆರವೇರಿಸಿ ಅವರು ಮಂಗಳವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಓದಿನ ಮೇಲಿನ ಆಸಕ್ತಿಯು ಜ್ಞಾನವನ್ನು ವೃದ್ಧಿಸುತ್ತದೆ. ಅದೇ ರೀತಿ ಎಲ್ಲರ ಜತೆಗೆ ಒಡನಾಟ ಅಥವಾ ಸಂಪರ್ಕ ಇಟ್ಟುಕೊಂಡರೆ ಇದು ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ಓಡಾಟ ನಮಗೆ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವ ಕಲೆಯನ್ನು ನೀಡುತ್ತದೆ ಇದು ಪತ್ರಕರ್ತನಾಗಿ ಮುಂದುವರಿಯುವವನಿಗೆ ಮುಖ್ಯ ಎಂಬ ಕಿವಿಮಾತನ್ನು ನೀಡಿದರು.

ಪತ್ರಕರ್ತನಾದವನಿಗೆ ಅವನಿಗೆ ಅವನೇ ಗುರು. ಹಾಗಾಗಿ ಗೊತ್ತಿಲ್ಲ ಎಂಬ ಮಾತು ಇರಬಾರದು. ಏಕೆಂದರೆ ಆಧುನಿಕ ತಂತ್ರಜ್ಞಾನದ ಮೂಲಕ ಎಲ್ಲವನ್ನು ತಿಳಿಯಲು ಸಾಧ್ಯ. ಎಲ್ಲಾ ವಿಷಯದಲ್ಲೂ ಕುತೂಹಲ ಎನ್ನುವುದು ಅಗತ್ಯ ಇದು ಸಾಮಾನ್ಯ ಜ್ಞಾನವನ್ನು ನೀಡುತ್ತದೆ. ಹಾಗಾಗಿ ಮುಂದೆ ಪತ್ರಕರ್ತನಾದಾಗ ಎಲ್ಲವನ್ನು ಕಲಿಯುವ ಮನೋಭಾವ ಮೈಗೂಡಿಸಿಕೊಂಡಾಗ ಮಾತ್ರ ವ್ಯಕ್ತಿ, ವ್ಯಕ್ತಿತ್ವ ಬೆಳೆಯಲು ಸಾಧ್ಯ ಎಂದರು.

ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಮಾಧ್ಯಮ ಎನ್ನುವುದು ಜನಸಾಮಾನ್ಯರ ಅಭಿಪ್ರಾಯವನ್ನು ನೀಡುವ ವೇದಿಕೆ. ಇದು ಸಮಾಜಕ್ಕೆ ಯಾವ ರೀತಿಯ ಕೊಡುಗೆಯನ್ನು ನೀಡಲು ಸಾಧ್ಯ ಎಂಬುದನ್ನು ತಿಳಿದುಕೊಂಡು ಪತ್ರಕರ್ತರು ಜಾಗೃತರಾಗಬೇಕು. ಮಾಧ್ಯಮಗಳು ಸಮಾಜದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿ ಅದು ಸಮಾಜಕ್ಕೆ ಪೂರಕವಾಗಿ ಸಂಮೃದ್ಧವಾಗಿ ಬೆಳೆಯುವಂತೆಯಾಗಲಿ ಎಂದರು. ಇಲ್ಲಿ ನಡೆಯುವ ಸ್ಪರ್ಧೆಗಳು ವಿದ್ಯಾರ್ಥಿಗಳ ಮುಂದಿನ ವೃತ್ತಿ ಜೀವನಕ್ಕೆ ಇದು ಸಹಕಾರಿಯಾಗಲಿ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರಿನಿವಾಸ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಎಲ್ಲ ಪ್ರಾಯೋಗಿಕ ಶಿಕ್ಷಣವನ್ನು ಕಲಿತು ಮುಂದಿನ ವೃತ್ತಿ ಜೀವನಕ್ಕೆ ಇದು ಸಹಕಾರಿ. ಹಾಗಾಗಿ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ಶುಭಹಾರೈಸಿದರು.

ನಿವೃತ್ತ ಪ್ರಾಚಾರ್ಯ ಡಾ.ಮಾಧವ ಭಟ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರುಗಳಾದ ರಾಧಿಕಾ ಕಾನತ್ತಡ್ಕ, ಪ್ರಜ್ಞಾ ಬಾರ್ಯ, ಸುಶ್ಮಿತಾ ಜೆ, ಭರತ್‌ರಾಜ್ ಹಾಗೂ ಎಂ.ಸಿ.ಜೆ ಲ್ಯಾಬ್ ಸಹಾಯಕ ಸಂತೋಷ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿಗಳಾದ ಸುಷ್ಮಾ ಸದಾಶಿವ್, ಸಾಯಿಶ್ರೀ ಪದ್ಮ ಕಾರ್ಯಕ್ರಮ ನಿರೂಪಿಸಿದರು.