Monday, January 20, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಮಾಧ್ಯಮ ಹಬ್ಬದ ಸಮಾರೋಪ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಶಾಲೆ-ಕಾಲೇಜಿನಲ್ಲಿ ಕಲಿಯುವ ಶಿಕ್ಷಣದ ಜತೆಗೆ ಪ್ರತಿನಿತ್ಯ ತಮ್ಮ ವ್ಯವಹಾರಗಳ ಅನುಭವದ ಮೂಲಕವು ಜೀವನ ಪಾಠವನ್ನು ಕಲಿಯಬೇಕು. ಇದು ವಿದ್ಯಾರ್ಥಿಗಳಿಂದ ತಮ್ಮ ಜೀವತದ ಕೊನೆಯ ತನಕ ಈ ಪಾಠ ಮುಂದುವರೆಯುತ್ತದೆ. ಅದೇ ರೀತಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾಯೋಗಿಕ ಶಿಕ್ಷಣವನ್ನು ಪಡೆದು ವಸ್ತುನಿಷ್ಟವಾದ ಬರವಣಿಗೆಗಳ ಮೂಲಕ ಗುರುತಿಸಿಕೊಳ್ಳುವಂತಾಗಲಿ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಭಿಪ್ರಾಯಪಟ್ಟರು.

ವಿವೇಕಾನಂದ ಮಹಾವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಗಳ ವತಿಯಿಂದ ಮಂಗಳವಾರ ನಡೆದ “ಮೀಡಿಯಾ ವಿವೇಕ್” ಎಂಬ ರಾಜ್ಯಮಟ್ಟದ ಪ್ರತಿಭಾ ಶೋಧನ ಮಾಧ್ಯಮ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತರ ಬರವಣಿಗೆ ಉತ್ತಮವಾಗಿದ್ದರೆ ಅದು ದೇಶದ ಇತಿಹಾಸವಾಗಿ ಉಳಿಯುತ್ತದೆ. ಅದು ಮುಂದೆ ದೇಶದ ದಾಖಲೆಯೂ ಆಗಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಸಮಾಜಕ್ಕೆ ಪೂರಕ ಹಾಗೂ ವಸ್ತುನಿಷ್ಟ ಬರಹಗಳನ್ನು ನೀಡುವ ಮೂಲಕ ಸಮಾಜದ ಏಳಿಗೆಯೊಂದಿಗೆ ದೇಶದ ಏಳಿಗೆಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಉದ್ದೇಶದಿಂದ ಭಾಗವಹಿಸದೆ ಅನುಭವವನ್ನು ಪಡೆದುಕೊಂಡು ವ್ಯಕ್ತಿತ್ವ ವಿಕಸನಕ್ಕೆ ದಾರಿ ದೀಪವಾಗುವ ಕಾರ್ಯಕ್ರಮ ಇದಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ಮಾತನಾಡಿ, ಪತ್ರಿಕೋದ್ಯಮ ವಿಭಾಗ ಎಲ್ಲ ವಿಷಯಗಳ ಅಥವಾ ವಿಭಾಗಗಳ ವಿದ್ಯಾರ್ಥಿಗಳು ಆಸಕ್ತಿ ತೋರಿಸುವ ವಿಷಯವಾಗಿದೆ. ಹಾಗಾಗಿ ಈ ಸ್ಪರ್ಧೆಗೆ ಇತರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿರುವುದು ಅಭಿನಂದನೀಯ. ಮಲ್ಲಿಗೆ ಮೊಗ್ಗು ಯಾವ ರೀತಿ ಅರಳುತ್ತದೆಯೋ ಅದೇ ರೀತಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ಪ್ರತಿಭೆಗಳ ಪ್ರದರ್ಶನದ ಮೂಲಕ ಅರಳುವ ಕಾರ್ಯವಾಗಿದೆ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಯ ಎಂ.ಟಿ. ಜಯರಾಮ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಎಲ್ಲ ಪ್ರಾಯೋಗಿಕ ಶಿಕ್ಷಣವನ್ನು ಕಲಿತು ತಮ್ಮ ವೃತ್ತಿ ಜೀವನವನ್ನು ಇಲ್ಲೇ ನಡೆಸುವ ಕಾರ್ಯವಾಗುತ್ತಿದೆ. ದೇಶದ ಏಳಿಗೆಗೆ ವಿದ್ಯಾರ್ಥಿಗಳ ಕೊಡುಗೆ ಅಪಾರ. ಹಾಗಾಗಿ ದೃಢ ದೇಶದ ನಿರ್ಮಾಣ ಎಲ್ಲರು ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪ್ರದಾನ
ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡರು. ಮೂಡುಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡರು. ರಸಪ್ರಶ್ನೆ, ಮಾಕ್ ಪ್ರೆಸ್, ಲೈವ್ ರಿಪೋರ್ಟಿಂಗ್, ಪ್ರಬಂಧ ಸ್ಪರ್ಧೆ, ಮ್ಯಾಡ್ ಆಡ್, ಸ್ಟೋರಿ ಬಿಲ್ಡಿಂಗ್, ರೇಡಿಯೋ ಜಾಕಿ, ಸರ್‌ಪ್ರೈಸ್ ಇವೆಂಟ್ ಸ್ಪರ್ಧೆಗಳು ನಡೆದವು.

ವಿಶೇಷ ಸಂಚಿಕೆ ಬಿಡುಗಡೆ
ಈ ಕಾರ್ಯಕ್ರಮದ ಅಂಗವಾಗಿ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿಭಾಗದ ಕುರಿತು ಸಂಪೂರ್ಣ ಪರಿಚಯವನ್ನು ನೀಡುವ ‘ವಿಕಸನ’ ಎಂಬ ವಿಶೇಷ ಸಂಚಿಕೆ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪ್ರಕಟಿಸಿದ ‘ವಿಕಾಸ’ ಎಂಬ ಫೋಟೋ ಜರ್ನಲ್ ಅನ್ನು ಬಿಡುಗಡೆಗೊಳಿಸಲಾಯಿತು. ಪದವಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮೀಡಿಯಾ ವಿವೇಕ್ ಕಾರ್ಯಕ್ರಮದ ಸಂಪೂರ್ಣ ಚಿತ್ರಣವನ್ನು ನೀಡುವ ವೀಡಿಯೋ ತುಣುಕುಗಳನ್ನು ಪ್ರದರ್ಶಿಸಿದರು.

ವೇದಿಕೆಯಲ್ಲಿ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರೂಪಿಸಿದರು.