Sunday, January 19, 2025
ಸುದ್ದಿ

ಮಂಗಳೂರಿನ ಅದ್ವಿಕಾ ಶೆಟ್ಟಿಗೆ ರಾಜ್ಯ ಪ್ರಶಸ್ತಿಯ ಗರಿ | ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ.

ಮಂಗಳೂರು : ಝೀ ಟಿವಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಕಲರ್ಸ್‌ ಕನ್ನಡ ಡ್ಯಾನ್ಸಿಂಗ್ ಸ್ಟಾರ್ ಪ್ರತಿಭೆ ಮತ್ತು ತುಳುವ ಸಿರಿ ಪ್ರಶಸ್ತಿ ಪುರಸ್ಕೃತೆ ಮಂಗಳೂರಿನ ಅದ್ವಿಕಾ ಶೆಟ್ಟಿಯವರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ಕಬ್ಬನ್​ಪಾರ್ಕ್​ನಲ್ಲಿರುವ ಜವಹರಲಾಲ್ ಬಾಲವನದಲ್ಲಿ ಸಂಸದ ಪಿ.ಸಿ ಮೋಹನ್ ಅವರು ಕಲಾಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರಾವಳಿಯ ಪುಟ್ಟ ಬಾಲೆ ಅದ್ವಿಕಾ ಶೆಟ್ಟಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.

ಈಕೆಯ ಅಪೂರ್ವ ಸಾಧನೆಯನ್ನು ಗುರುತಿಸಿ 2016 ರಲ್ಲಿ ಈ ಪ್ರತಿಭೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಅನ್ನುವಂತೆ ರಾಜ್ಯ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಸಿಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಡಾ. ಕೃಪಾ ಅಮರ್ ಆಳ್ವಾ ಹೀಗೆ ಅನೇಕ ಗಣ್ಯತಿ ಗಣ್ಯರು ಉಪಸ್ಥಿತರಿದ್ದ ವೇದಿಕೆಯಲ್ಲಿ ಅದ್ವಿಕಾ ಶೆಟ್ಟಿ ರಾಜ್ಯ ಪ್ರಶಸ್ತಿಯನ್ನು ಪಡೆಯುವ ಮೂಲಕ ಕರಾವಳಿಯ ಕಂಪನ್ನು ಎಲ್ಲೆಡೆ ಪಸರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಾಕ್ಷೇತ್ರದ ಅಪ್ರತಿಮ ಕಲಾವಿದೆ ಬೇಬಿ ಅದ್ವಿಕಾ ಶೆಟ್ಟಿ

ಈಕೆಯದು ಹನ್ನೆರಡರ ವಯಸ್ಸು. ಆದರೆ ಈಕೆಯ ಸಾಧನೆ ವಯಸ್ಸನ್ನೂ ಮೀರಿಸುವಂತಹದ್ದು. ಕಲಾಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರಾವಳಿಯ ಈ ಪುಟ್ಟ ಬಾಲೆ ಯಕ್ಷ ಗಾನ, ಡಾನ್ಸ್‌, ಭರತನಾಟ್ಯ, ಸಂಗೀತ, ಸೈಕ್ಲಿಂಗ್‌, ಅಂಚೆ ಚೀಟಿ ಸಂಗ್ರಹ, ಚಿತ್ರ ರಚನೆ ಸೇರಿದಂತೆ ಅನೇಕ ಕಲಾಪ್ರಕಾರಗಳಲ್ಲಿ ಸದಾ ಮುಂದು.

ಸುರತ್ಕಲ್ ಸುಭಾಷಿತ ನಗರದ ವೇಣುಗೋಪಾಲ್ ಶೆಟ್ಟಿ ಮತ್ತು ಅರ್ಪಿತಾ ಶೆಟ್ಟಿ ದಂಪತಿಯ ಪುತ್ರಿಯಾದ ಅದ್ವಿಕಾ ಶೆಟ್ಟಿಗೆ ಡ್ಯಾನ್ಸ್ ಕ್ಷೇತ್ರದಲ್ಲಿ ಎಲ್ಲಿಲ್ಲದ ಆಸಕ್ತಿ. ಮಂಗಳೂರಿನ ಓಷಿಯನ್‌ ಕಿಡ್ಸ್‌ ಡಾನ್ಸ್‌ ಅಕಾಡೆಮಿಯ ಪ್ರಮೋದ್‌ ಆಳ್ವ ಅವರಿಂದ ಪಾಶ್ಚಾತ್ಯ, ಕಥಕ್‌, ಜಾನಪದ, ಸೆಮಿ ಕ್ಲಾಸಿಕಲ್‌ ಸೇರಿದಂತೆ ನೃತ್ಯದ ಅನೇಕ ಕಲಾ ಪ್ರಕಾರಗಳನ್ನು ಕಲಿಯುತ್ತಿರುವ ಇವರು ವಿದುಷಿ ಪ್ರತಿಮಾ ಶ್ರೀಧರ್‌ ಹಾಗೂ ಶ್ರೀಧರ್‌ ಹೊಳ್ಳ ಅವರಲ್ಲಿ ಭರತನಾಟ್ಯವನ್ನೂ ಅಭ್ಯಸಿಸುತ್ತಿದ್ದಾರೆ. ಸುಹಾಸ್‌ ಅಮೀನ್‌ ಅವರಿಂದ ಹಿಪ್‌ ಹಾಪ್‌ ಡಾನ್ಸ್‌ ನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಯಕ್ಷಗಾನದಲ್ಲೂ ಈ ಪ್ರತಿಭೆಯದು ಎತ್ತಿದ ಕೈ. ಗುರುಗಳಾದ ರಕ್ಷಿತ್‌ ಶೆಟ್ಟಿ ಪಡ್ರೆಯವರಿಂದ ಧೀಂಕಿಟದ ದೀಕ್ಷೆ ಪಡೆದುಕೊಂಡಿರುವ ಇವರು ಯಕ್ಷ ಗಾನ ಕುಣಿತ ಮತ್ತು ಮಾತುಗಾರಿಕೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಶ್ರೀಕೃಷ್ಣ, ಸುದರ್ಶನ, ಕಾಳಿ, ಸತ್ಯವತಿ ಹೀಗೆ ಅನೇಕ ಪಾತ್ರಗಳ ಮೂಲಕ ಯಕ್ಷರಂಗದಲ್ಲಿ ಮಿಂಚಿದ್ದಾರೆ.

ತನ್ನ ಎಳೆಯ ವಯಸ್ಸಿನಲ್ಲಿಯೇ ರಾಜ್ಯ, ಅಂತರ್‌ ಜಿಲ್ಲಾ ಮಟ್ಟ ಮತ್ತು ಅನೇಕ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಮುಡಿಗೇರಿಸಿಕೊಂಡು ಬಂದಿರುವ ಅದ್ವಿಕಾ ಶೆಟ್ಟಿ 500 ಕ್ಕೂ ಮಿಕ್ಕಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ತಮ್ಮ ಏಳನೇ ವಯಸ್ಸಿನಲ್ಲಿ ಝೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಜೂನಿಯರ್ಸ್‌ ಡಾನ್ಸ್‌ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಸೆಮಿಫೈನಲ್‌ ತಲುಪಿದ್ದರು. ತದ ನಂತರ ಡಾನ್ಸಿಂಗ್‌ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಸೆಕೆಂಡ್‌ ರನ್ನರ್‌ ಅಪ್‌ ಆಗಿ ಮಿಂಚಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡಿದ್ದರು.

ಹಿಂದಿ ಚಾನೆಲ್‌ನಲ್ಲಿ ಆಯೋಜಿಸಿದ್ದ ಡಿಐಡಿ ಲಿಟ್ಲ್‌ ಮಾಸ್ಟರ್ಸ್‌ ಸೀಸನ್‌ 3ಗೆ ಆಯ್ಕೆಯಾಗಿದ್ದ ಅದ್ವಿಕಾ, ಉತ್ತಮ ಪ್ರದರ್ಶನ ನೀಡಿದ್ದು ಪ್ರಶಂಸೆಗೆ ಪಾತ್ರವಾಗಿದ್ದರು. ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ 1000 ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿರುವ ಅದ್ವಿಕಾ ಇದೀಗ ಸದ್ದಿಲ್ಲದೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಸಿನಿಮಾ ಕ್ಷೇತ್ರಕ್ಕೂ ಸೈ ಎನಿಸಿಕೊಂಡಿರುವ ಇವರು ತುಳು ಭಾಷೆಯ ಚಿತ್ರಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಕಲಾ ಕ್ಷೇತ್ರದ ಈ ಎಲ್ಲಾ ಸಾಧನೆಗೆ ಕರ್ನಾಟಕ ಪ್ರತಿಭಾ ರತ್ನ, ಸೌರಭ ಪ್ರತಿಭಾ ಪುರಸ್ಕಾರ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪಶಸ್ತಿಗಳನ್ನು ಪಡೆದುಕೊಂಡಿರುವ ಹಿರಿಮೆ ಇವರಿಗಿದೆ.

Leave a Response