ಯಲಹಂಕದ ವಾಯುನೆಲೆಯಲ್ಲಿ ನಡೆದ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದ ವೇಳೆ ಗೇಟ್ ನಂಬರ್ 5 ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 277 ಕಾರುಗಳು ಸುಟ್ಟು ಕರಕಲಾಗಿತ್ತು. ಇದರಲ್ಲಿ 277 ಕಾರುಗಳ ಪೈಕಿ ಆರು ಕಾರುಗಳ ಮಾಲಿಕತ್ವ ಹಾಗೂ ಮಾಲೀಕರು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಕಾರುಗಳು ಸುಟ್ಟು ಸಂಪೂರ್ಣ ಕರಕಲಾಗಿದ್ದು, ಎಂಜಿನ್ ಸಂಖ್ಯೆ, ಚಾಸೀಸ್ ಸಂಖ್ಯೆಯನ್ನು ಕೂಡ ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾಲಿಕತ್ವ ಗೊತ್ತಾಗುತ್ತಿಲ್ಲ. ಅಲ್ಲದೇ ಆ ಕಾರುಗಳನ್ನು ತಮ್ಮದು ಎಂದು ಹೇಳಿಕೊಂಡು ಯಾರೂ ಕೂಡ ಬಂದಿಲ್ಲ.
ಹೀಗಾಗಿ ಕಾರುಗಳ ವಿಲೇವಾರಿ ಮತ್ತು ವಿಮೆ ಕ್ಲೇಮ್ ಆಗುತ್ತಿಲ್ಲ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ. ಕಾರುಗಳು ಮಾಲೀಕರಿಗೆ ತ್ವರಿತವಾಗಿ ವಿಮೆ ಕ್ಲೇಮ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ವಿಮಾ ಕಂಪನಿಗಳು ಹಾಗೂ ಸಾರಿಗೆ ಇಲಾಖೆ ಮತ್ತು ಪೊಲೀಸರ ಸಹಯೋಗದಲ್ಲಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.