ಮಾನವಕುಲದಲ್ಲಿ ಮಾತ್ರವಲ್ಲದೇ ಇಡೀ ಪ್ರಾಣಿ ಸಂಕುಲದಲ್ಲಿ ಮಾತೃವಿನ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಮಕ್ಕಳ ಮೇಲೆ ಯಾರೇ ತಿರುಗಿಬಿದ್ದು ಹಲ್ಲೆ ನಡೆಸಿದರೂ ತಾಯಿ ಎಂದಿಗೂ ಈ ಕೆಲಸಕ್ಕೆ ಕೈಹಾಕುವುದಿಲ್ಲ ಎನ್ನುವ ನಂಬಿಕೆಯಿದೆ. ಆದರೆ ಇದಕ್ಕೆ ವಿರುದ್ದ ಎನ್ನುವ ರೀತಿ ಮುಂಬೈನ ಮಹಿಳೆ ನಡೆದುಕೊಂಡಿದ್ದಾಳೆ.
ಹೌದು, ಮುಂಬೈನ ಓರ್ವ ಮಹಿಳೆ ತನ್ನ ಮಾಜಿ ಪತಿಯಿಂದ ಪ್ರತಿ ತಿಂಗಳು ಬರುವ ಪರಿಹಾರ ಮೊತ್ತ ಹೆಚ್ಚಿಸಿಕೊಳ್ಳಲು ಅಥವಾ ತಡವಾಗಿ ಬಂದರೆ, ತನ್ನ ನಾಲ್ಕೂವರೆ ವರ್ಷದ ಮಗನ ಮೇಲೆ ಹಲ್ಲೆ ನಡೆಸಿ ವಿಡಿಯೊ ಮಾಡುವ ನೀಚ ಕೆಲಸಕ್ಕೆ ಇಳಿದಿದ್ದಾಳೆ. ಇತ್ತೀಚೆಗಷ್ಟೇ ಈ ರೀತಿ ಮಗನ ಮೇಲೆ ಹಲ್ಲೆ ನಡೆಸಿರುವ ವಿಡಿಯೊವನ್ನು ಪತಿಗೆ ಕಳಿಸುತ್ತಿದ್ದಂತೆ, ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ಬಿಡುಗಡೆಯಾಗಿರುವ ವಿಡಿಯೊದಲ್ಲಿ ಮಹಿಳೆ, ಮಗನನ್ನು ಬೆತ್ತಲೆಗೊಳಿಸಿ ಸ್ಟೀಲ್ ಕೈಸೌಟಿನಿಂದ ಹೊಡೆಯುತ್ತಿದ್ದಾಳೆ. ನೋವಿನಿಂದ ಮಗ ಆಚೀಚೆ ಓಡಿದರೆ ಎಳೆದುಕೊಂಡು ಬಂದು ಹೊಡೆಯುವ ದೃಶ್ಯ ಮನಕಲಕುವಂತಿದೆ.ಪ್ರಮುಖವಾಗಿ ಮಹಿಳೆ ತನ್ನ ಪತಿಯಿಂದ ದೂರಾಗಿದ್ದು, ಮಗುವನ್ನು ತನ್ನೊಂದಿಗೆ ಇರಿಸಿಕೊಂಡಿದ್ದಾಳೆ.
ಪ್ರತಿ ತಿಂಗಳು ಮಾಜಿ ಪತಿ ಪರಿಹಾರಕ್ಕೆಂದು ಆರು ಸಾವಿರ ಹಣ ಕಳುಹಿಸದಿದ್ದರೆ, ಈ ರೀತಿ ಮಗನಿಗೆ ತೊಂದರೆ ಕೊಡುತ್ತಾಳೆ. ನಿನ್ನಪ್ಪ ಕೇವಲ ಆರು ಸಾವಿರ ಕೊಡುತ್ತಾರೆ. ಆದರೆ ನಾನು ನಿನಗೆ 40ಸಾವಿರ ಖರ್ಚು ಮಾಡುತ್ತಿದ್ದೇನೆ ಎನ್ನುವ ಮಾತನ್ನು ಮಗನ ಮುಂದೆ ಹೇಳಿದ್ದಾಳೆ.