Tuesday, January 21, 2025
ಸುದ್ದಿ

ಗ್ರಂಥಾಲಯಗಳಲ್ಲಿ ಅಧ್ಯಯನಗಳು ನಡೆಯಲಿ: ಡಾ.ಪಾದೆಕಲ್ಲು ವಿಷ್ಣುಭಟ್ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳಿಗೆ ಹಿಂದಿನ ಕಾಲದಲ್ಲಿ ಗ್ರಂಥಾಲಯಗಳ ಬಳಕೆಗೆ ಸಮಯದ ಕೊರತೆ ಕಾಡುತ್ತಿತ್ತು. ಆದರೆ ಇಂದು ಶಾಲೆ, ಕಾಲೇಜಿನಲ್ಲಿ ವ್ಯವಸ್ಥಿತ ಹಾಗೂ ಓದಲು ಬೇಕಾದಷ್ಟು ಸಮಯವನ್ನು ನೀಡುವ ಕಾರ್ಯವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸೂಕ್ತವಾಗಿ ಉಪಯೋಗಿಸುವ ಮೂಲಕ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ನುಡಿದರು.

ಅವರು ವಿವೇಕಾನಂದ ಕಾಲೇಜಿನ ಬೈಂದೂರು ಪ್ರಭಾಕರರಾವ್ ಸಭಾಭವನದಲ್ಲಿ ಶುಕ್ರವಾರ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಸಹಯೋಗದಲ್ಲಿ ಸಿದ್ಧಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ “ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ”ದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಯನ ಎಂದರೆ ಕೇವಲ ಓದು ಅಲ್ಲ. ಅದು ಚಿಂತನೆ. ಆ ಮೂಲಕ ವ್ಯಾಕರಣ, ಭಾಷೆಯ ಕುರಿತು ಚಿಂತನೆಗಳನ್ನು ನಡೆಸಿ ವಿಷಯದ ಆಳವಾದ ಜ್ಞಾನವನ್ನು ಪಡೆಯಲು ಸಾಧ್ಯ. ಹಾಗಾಗಿ ಛಂದಸ್ಸು, ವ್ಯಾಕರಣಗಳನ್ನು ಕರಗತ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರಲ್ಲದೆ ತಮ್ಮ ಜೀವನದಲ್ಲಿ ಒಳ್ಳೆಯ ಗುರು, ಮಾರ್ಗದರ್ಶಕರು ದೊರೆತದ್ದು ಸಹಕಾರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವರಿಗೆ ಪಂಡಿತರನ್ನು ನೋಡುವಂತಹ ಅವಕಾಶ ಸಿಗುವುದಿಲ್ಲ. ಆದರೆ ತನಗೆ ಪಂಡಿತರಿಂದ ಕಲಿಯುವ ಅವಕಾಶ ಲಭ್ಯವಾಗಿರುವುದು ಭಾಗ್ಯ. ಹಿರಿಯ ಮಾರ್ಗದರ್ಶನದಿಂದ ಇಂತಹ ಬರವಣಿಗೆಯ ಮೂಲಕ ಲೇಖನ, ಕೃತಿಯನ್ನು ರಚಿಸಲು ಸಾಧ್ಯವಾಯಿತು ಎಂದು ಹಿರಿಯರನ್ನು ನೆನಪಿಸಿಕೊಂಡರು.

ಕಲಿಕೆ ಎಂಬುದು ಯಾವಾಗಲು ನಡೆಯುತ್ತದೆ. ಅದೇ ರೀತಿ ಅಧ್ಯಯನ ಎನ್ನುವುದು ಎಂದೂ ಪೂರ್ಣವಾಗುವುದಿಲ್ಲ. ಅದು ಅಪೂರ್ಣವೇ. ಜೀವನದಲ್ಲಿ ಅಧ್ಯಯನವೇ ಮಾರ್ಗ ಅಥವಾ ಗುರಿಯಾಗಿರುತ್ತದೆ. ಉಪನ್ಯಾಸಕರು ಎಂದರೆ ಕಲಿಯುವುದು.

ತನ್ನ ಉಪನ್ಯಾಸ ವೃತ್ತಿಯು ವಿಶ್ರಾಂತಿಯ ಬಳಿಕವೂ ಅನೇಕರಿಗೆ ಮಾರ್ಗದರ್ಶನವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದೇನೆ. ಏಕೆಂದರೆ ನಿವೃತ್ತಿಯ ಬಳಿಕ ದೊರೆಯುವ ಪಿಂಚಣಿಯನ್ನೇ ಇದರ ಸಂಬಳವಾಗಿ ಪಡೆದುಕೊಳ್ಳುತ್ತಿದ್ದೇನೆ. ಸಿದ್ದಮೂಲೆ ಶಂಕರನಾರಾಯಣ ಭಟ್ ಅವರನ್ನು ಸ್ಮರಿಸಿಕೊಂಡು ಅವರ ನೆನಪಿನಲ್ಲಿ ನೀಡುತ್ತಿರುವ ಈ ಪ್ರಶಸ್ತಿ ದೊರೆತಿರುವುದು ಸ್ಮರಣೀಯ ಎಂದರು.

ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಅರುಣ್‍ಕುಮಾರ್ ಎಸ್.ಆರ್. ಅವರು ಅಭಿನಂದನಾ ಮಾತುಗಳನ್ನಾಡಿ, ಪಾದೆಕಲ್ಲು ವಿಷ್ಣು ಭಟ್ ಅವರ ಕನ್ನಡದ ಶಾಸ್ತ್ರೀಯತೆ, ಪರಂಪರೆ, ಸಂಸ್ಕೃತ, ತುಳು ಸಂಸ್ಕೃತಗಳ ಅಧ್ಯಯನ ಹಾಗೂ ಕೃತಿಗಳು ಇಂದಿನ ಸಾಹಿತ್ಯ ಸಂಪತ್ತು ಆಗಿದೆ.

ಪಂಡಿತ ಪರಂಪರೆಯ ಕೊಂಡಿ ಪಾದೆಕಲ್ಲು ವಿಷ್ಣುಭಟ್. ಸೇಡಿಯಾಪು ಕೃಷ್ಣಭಟ್ ಅವರಂತಹ ಮಹಾ ಪಂಡಿತರ ಮಾರ್ಗದರ್ಶನದಲ್ಲಿ ಬೆಳೆದವರು. ಅವರ ತಾಳ್ಮೆ ಅದುವೇ ಶಕ್ತಿ. ಅವರ ಸಾಧನೆ ಹಾಗೂ ಸಾಹಿತ್ಯಗಳ ಅಧ್ಯಯನಗಳ ಮುಖಾಂತರ ಭಾಷೆ, ಸಂಸ್ಕೃತಿಗೆ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂಸ್ಕತಿಕ ಹಿನ್ನೆಲೆಯ ಭಾಷೆಯ ದೇಶ. ಆದರೆ ಇತ್ತೀಚೆಗೆ ಭಾಷೆಯನ್ನು ಬಳಸುವ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೆ ಭಾಷಾ ವೈವಿಧ್ಯಗಳು ಅಳಿವಿನಂಚಿನಲ್ಲಿದೆ. ಇದಕ್ಕೆ ಸಾಹಿತ್ಯಗಳ ಕೊರತೆಯೂ ಒಂದು ಕಾರಣವಾಗಿದೆ. ಹಾಗಾಗಿ ಅಂತಹ ಭಾಷೆಯ ಕುರಿತ ಅಧ್ಯಯನ ನಡೆಯಬೇಕು.

ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಧ್ಯಯನ ಇಲ್ಲದೆ ದಿಢೀರ್ ಸಾಹಿತ್ಯಗಳು ಹುಟ್ಟಿಕೊಳ್ಳುತ್ತಿದ್ದಾರೆ. ಇದು ಸಾಹಿತ್ಯಕ್ಷೇತ್ರದ ವಿಪರ್ಯಾಸ. ಸಾಹಿತ್ಯದ ಮೂಲಗಳನ್ನು ಉಳಿಸುವ ಕಾರ್ಯವಾಗಬೇಕು. ಹಾಗೂ ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಾಹಿತಿಗಳಿಗೆ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭದ ಮುಖೇನ ಇತರ ಕುರಿತು ಚಿಂತಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಸಾಹಿತಿ ತಾಳ್ತಜೆ ವಸಂತ ಕುಮಾರ್, ಪ್ರೊ. ಎ.ವಿ. ನಾರಾಯಣ, ಪ್ರೊ.ವತ್ಸಲಾರಾಜ್ಞಿ, ಪ್ರೊ.ರವಿರಾಮ್ ಸಿದ್ಧಮೂಲೆ, ಸಿದ್ಧಮೂಲೆ ಶಂಕರನಾರಾಯಣ ಕುಟುಂಬಸ್ಥರು, ಕನ್ನಡ ವಿಭಾಗದ ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ವಾಲು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಚೈತ್ರಾ, ಹರ್ಷಿತಾ, ಶ್ರಾವ್ಯಾ ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾಲೇಜಿನ ಐಕ್ಯುಎಸಿ ಸಂಯೋಜಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ವಂದಿಸಿದರು. ಉಪನ್ಯಾಸಕಿ ಡಾ. ಗೀತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.