Wednesday, January 22, 2025
ಸುದ್ದಿ

ಯುವ ಆಟಗಾರರು ಕಬಡ್ಡಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು: ಎನ್.ಚಂದ್ರಹಾಸ ಶೆಟ್ಟಿ – ಕಹಳೆ ನ್ಯೂಸ್

ಪುತ್ತೂರು: ದೈಹಿಕ ಹಾಗೂ ಮಾನಸಿಕ ಪ್ರಬುದ್ಧತೆಯನ್ನು ಬಯಸುವ ಪ್ರಾದೇಶಿಕ ಕ್ರೀಡೆ ಕಬಡ್ಡಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರೋತ್ಸಾಹ ದೊರಕುತ್ತಿದ್ದು ಯುವ ಆಟಗಾರರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಪುತ್ತೂರು ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಗೌರವಾಧ್ಯಕ್ಷ ಶ್ರೀ.ಎನ್.ಚಂದ್ರಹಾಸ ಶೆಟ್ಟಿ ಹೇಳಿದರು.

ಅವರು ನೆಹರೂನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಮ್ಯಾಟ್ ಅಂಕಣದ ಪ್ರೊ-ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾಟದ 5ನೇ ಆವೃತ್ತಿಗೆ ಚಾಲನೆ ನೀಡಿ ಮಾತಾಡಿದರು. ಜೀವನದಲ್ಲಿ ಉನ್ನತ ಸ್ಥಾನವನ್ನು ಗಳಿಸುವುದಕ್ಕೆ ಪ್ರತಿಯೊಬ್ಬರಲ್ಲಿಯೂ ಸಮಯ ಪರಿಪಾಲನೆ ಮತ್ತು ಶಿಸ್ತು ಅಗತ್ಯ, ಕ್ರೀಡಾ ಕ್ಷೇತ್ರದಲ್ಲಿಯೂ ಇದನ್ನು ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರಮಟ್ಟದ ಹೆಸರಾಂತ ಪ್ರೊ-ಕಬಡ್ಡಿ ಆಟಗಾರ ಶ್ರೀ.ಪ್ರಶಾಂತ್ ರೈ ಕೈಕಾರ ಮಾತನಾಡಿ ಪ್ರೊ-ಕಬಡ್ಡಿಯಿಂದಾಗಿ ಗ್ರಾಮೀಣ ಆಟವಾದ ಕಬಡ್ಡಿ ಇಂದು ಉನ್ನತ ಸ್ಥಾನಕ್ಕೇರಿದೆ, ಹಾಗೆಯೇ ಹಲವಾರು ಆಟಗಾರರ ಜೀವನಾಧಾರವಾಗಿದೆ ಎಂದರು. ಅನಿರೀಕ್ಷಿತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾದುದು ಹೆಚ್ಚು ಖುಷಿಯನ್ನು ನೀಡಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಶ್ರೀ.ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಸಾಧನೆಯ ಬಗ್ಗೆ ಆತ್ಮವಿಶ್ವಾಸ ಹೊಂದಿರಬೇಕು. ಆತ್ಮವಿಶ್ವಾಸದೊಂದಿಗೆ ಮುನ್ನಡೆದವರಿಗೆ ಸೋಲು ಒಂದು ತಾತ್ಕಾಲಿಕ ತಂಗುದಾಣ ಮಾತ್ರ ಎಂದರು. ಸತತ ಸಾಧನೆ ಮತ್ತು ನಿರ್ಧಿಷ್ಟ ಗುರಿ ನಿಮ್ಮನ್ನು ಪ್ರತಿ ಕ್ಷೇತ್ರದಲ್ಲೂ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ಹಿರಿಯ ಕಬಡ್ಡಿ ಆಟಗಾರ ವಸಂತ ಕಬಕ, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ.ಬಾಲಚಂದ್ರ ಭಾರ್ತಿಕುಮೇರು, ವಿದ್ಯಾರ್ಥಿ ಪ್ರತಿನಿಧಿ ಕಾರ್ತಿಕ್ ಪೆರುವೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ರಾಂತ ಹಿರಿಯ ಕಬಡ್ಡಿ ಆಟಗಾರ ವಸಂತ ಕಬಕ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಅಮೃತ್ ಕಲ್ಲಳಿಕೆ ಸ್ವಾಗತಿಸಿ, ಸಂಪತ್ ಶೆಣೈ ವಂದಿಸಿದರು. ಭವಿಷ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.