Saturday, January 25, 2025
ಸುದ್ದಿ

ಸಂಸದ ನಳಿನ್ ಟ್ವೀಟ್: ಐವನ್ ಡಿಸೋಜ ಗರಂ – ಕಹಳೆ ನ್ಯೂಸ್

ಮಂಗಳೂರು: ‘ರಾತ್ರಿ 3 ಗಂಟೆಗೆ ಶತ್ರು ದೇಶಕ್ಕೆ ನುಗ್ಗಿ ಹೊಡೆಯುವಂತೆ ಆದೇಶ ನೀಡುವವರಿಗೆ ಮತ ಹಾಕಬೇಕೆ ಹೊರತು, ರಾತ್ರಿ 3 ಗಂಟೆಗೆ ಉಗ್ರರಿಗಾಗಿ ಸುಪ್ರೀಂ ಕೋರ್ಟ್ನ ಬಾಗಿಲು ತೆರೆಸುವವರಿಗಲ್ಲಾ… ಮೋದಿ -ಮತ್ತೊಮ್ಮೆ ‘ಎಂದು ಟ್ವೀಟ್‌ಗೈದ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಚುನಾವಣಾ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿವಾರ ಸಂಜೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಆದರೆ ಸಂಸದ ನಳಿನ್ ಮಾರ್ಚ್ 11 ರ 10:16 ಕ್ಕೆ ಇಂತಹ ಟ್ವೀಟ್ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ, ದೇಶದ ರಕ್ಷಣೆಗಾಗಿ ಹೋರಾಡಿದ ವೀರ ಸೈನಿಕರ ಸಾಹಸವನ್ನು ಮತ ಪರಿವರ್ತನೆಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶ ರಕ್ಷಣೆಯು ಬಿಜೆಪಿಗರಿಗೆ ಮಾತ್ರ ಸೇರಿದ್ದಲ್ಲ. ದೇಶದ ಸೈನ್ಯವು ಬಿಜೆಪಿಗರಿಗೆ ಸೀಮಿತವಾಗಿಲ್ಲ. ಅವರು ಸಮಸ್ತ ದೇಶದ ಜನರ ಹೆಮ್ಮೆಯಾಗಿದ್ದಾರೆ. ಚುನಾವಣೆಯಲ್ಲಿ ಮತ ಗಳಿಕೆಗಾಗಿ ಬಿಜೆಪಿಯು ಇಂತಹ ಕೀಳುಮಟ್ಟಕ್ಕೆ ಇಳಿದಿರುವುದು ಖಂಡನೀಯ.

ಸೈನಿಕರ ಕುಟುಂಬವನ್ನು ಬೀದಿಗೆ ತಳ್ಳಿದ ಕೀರ್ತಿಯು ಮೋದಿಗೆ ಸಲ್ಲುತ್ತದೆ ಎಂದ ಐವನ್, ಕರಾವಳಿಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ಕಾಂಗ್ರೆಸ್ ಪಣ ತೊಟ್ಟಿದೆ. ದ.ಕ., ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಡಿಸಿಸಿ ಉಪಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್, ಕೆಪಿಸಿಸಿ ಸದಸ್ಯೆ ಯಶೋಧಾ, ಡಿಸಿಸಿ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.