ಯಾದಗಿರಿ: ಲೋಕಸಭೆ ಚುನಾವಣೆ ಬಗ್ಗೆ ಭವಿಷ್ಯ ಹೇಳಿದ್ದ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರಿಗೆ ಚುನಾವಣಾ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಯಾದಗಿರಿಯ ಅಬ್ಬೆತುಮಕೂರಿನ ಜಾತ್ರೆಯಲ್ಲಿ ಭಾಗವಹಿಸಿದ್ದ ಶ್ರೀಗಳು, ಲೋಕಸಭೆ ಚುನಾವಣೆ ಕುರಿತಾಗಿ ಭವಿಷ್ಯ ಹೇಳಿದ್ದು, ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಇದಕ್ಕೆ ಕಾಂಗ್ರೆಸ್ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದು ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿತ್ತು. ಶಿವಮೊಗ್ಗ ಸೇರಿದಂತೆ ವಿವಿಧೆಡೆ ಶ್ರೀಗಳು ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ದೂರು ನೀಡಲಾಗಿದೆ.
ಇದೇ ವೇಳೆ ಶ್ರೀಗಳಿಗೆ ಸಹಾಯಕ ಚುನಾವಣಾ ಅಧಿಕಾರಿ, ಯಾದಗಿರಿ ಗ್ರಾಮಾಂತರ ಠಾಣೆ ಪಿಎಸ್‌ಐ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ.
ಮಾರ್ಚ್ 10 ರಿಂದಲೇ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ನೀವು ಮಾರ್ಚ್ 11 ರಂದು ನೀಡಿದ ಹೇಳಿಕೆ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಲಿಖಿತ ರೂಪದಲ್ಲಿ 48 ಗಂಟೆಗಳ ಒಳಗೆ ಉತ್ತರಿಸಬೇಕೆಂದು ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.