ಲೋಕಸಭಾ ಚುನಾವಣೆಯ ಜೊತೆಜೊತೆಗೆ ವಿಧಾನಸಭಾ ಚುನಾವಣೆಯನ್ನೂ ಎದುರಿಸುತ್ತಿರುವ ಆಂಧ್ರಪ್ರದೇಶ ರಾಜಕೀಯದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಬಯೋಪಿಕ್ ಗಳು ರಾಜಕೀಯ ನಾಯಕರಿಗೆ ಕಂಗ್ಗಂಟಾಗಿ ಪರಿಣಮಿಸಿದೆ.
ಅದರಲ್ಲೂ ತೆಲುಗು ದೇಶಂ ಪಕ್ಷದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಸಂಕಷ್ಟ ಎದುರಾಗಿದ್ದು, ರಾಮ್ ಗೋಪಾಲ್ ವರ್ಮಾ ಅವರ ಲಕ್ಷ್ಮೀಸ್ ಎನ್ ಟಿಆರ್ ತೆಲುಗು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಎಂಬ ಮಾತು ಆರಂಭದಿಂದಲೂ ಕೇಳಿಬಂದಿತ್ತು.
ಅಷ್ಟೇ ಅಲ್ಲದೆ ಎನ್ ಟಿಆರ್ ಗೆ ಚಂದ್ರಬಾಬು ನಾಯ್ಡು ಮೋಸ ಮಾಡಿದರು ಎಂಬ ಬಗ್ಗೆ ಹೇಳಿಕೊಳ್ಳುವ ರಾಮ್ ಗೋಪಾಲ್ ವರ್ಮಾ ಚಿತ್ರದಲ್ಲಿ ನೈಜವಾಗಿರುವ ವಿಚಾರವನ್ನೇ ತೋರಿಸಲಾಗಿದೆ ಎಂದಿದ್ದಾರೆ. ಹೀಗಾಗಿ ಸಹಜವಾಗಿಯೇ ಇದು ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಅಳುಕು ಇದೀಗ ತೆಲುಗು ದೇಶಂ ಪಕ್ಷದ ನಾಯಕರನ್ನು ಕಾಡುತ್ತಿದೆ.
ಈ ಕುರಿತಂತೆ ಆನ್ ಲೈನ್ ಪೋಲ್ ಮಾಡಿರುವ ರಾಮ್ ಗೋಪಾಲ್ ವರ್ಮಾ ತನ್ನ ಚಿತ್ರ ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ. ಚಂದ್ರಬಾಬು ನಾಯ್ಡು ಹಾಗೂ ಎನ್ ಟಿಆರ್ ಕುಟುಂಬದ ಕೆಲವರ ಮುಖವಾಡ ಬಯಲು ಮಾಡಿದ್ದಾರಂತೆ ರಾಮ್ ಗೋಪಾಲ್ ವರ್ಮಾ ಅಂದಹಾಗೆ ಲಕ್ಷ್ಮೀಸ್ ಎನ್ ಟಿಆರ್ ಚಿತ್ರದಲ್ಲಿ ರಾಮ್ ಗೋಪಾಲ್ ವರ್ಮಾ, ಎನ್ ಟಿಆರ್ ಕುಟುಂಬದ ಕೆಲವು ಸದಸ್ಯರು ಹಾಗೂ ಚಂದ್ರಬಾಬು ನಾಯ್ಡು ಅವರ ಮುಖವಾಡವನ್ನು ಕಳಚಿದ್ದಾರಂತೆ. ಹೀಗಾಗಿ ವ್ಯಾಸರಾಯ್ ಹೊಟೇಲ್ ನಲ್ಲಿ ನಡೆದ ಘಟನೆಯನ್ನು ಯಾವುದೇ ಮುಚ್ಚುಮರೆಯಿಲ್ಲದೆ ಚಿತ್ರದಲ್ಲಿ ತೋರಿಸುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳುತ್ತಿರುವುದು ಸಹಜವಾಗಿಯೇ ಎನ್ ಟಿಆರ್ ಕುಟುಂಬ ಹಾಗೂ ಚಂದ್ರಬಾಬು ನಾಯ್ಡು ಅವರ ಆತಂಕಕ್ಕೆ ಕಾರಣವಾಗಿದೆ.
ಬಾಲಕೃಷ್ಣ ಅವರ ನಟನೆಯ ಎನ್ ಟಿಆರ್ ಚಿತ್ರ ಎರಡು ಸರಣಿಗಳಲ್ಲಿ ಮೂಡಿಬಂದರೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮೋಡಿಮಾಡುವಲ್ಲಿ ಸೋತುಹೋಯಿತು. ಅದೇನೆ ಇರಲಿ ಕೆಲವು ಟಿಡಿಪಿ ನಾಯಕರು ಚಿತ್ರ ಬಿಡುಗಡೆಯನ್ನು ತಡೆಹಿಡಿಯಬೇಕು ಎಂದು ನನ್ನಲ್ಲಿ ಕೇಳಿಕೊಂಡಿದ್ದು, ಆದರೆ ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ ಎನ್ನಲಾಗಿದ್ದು, ಯಾವುದೇ ಅಡೆತಡೆಯಿಲ್ಲದಿದ್ದರೆ ಚಿತ್ರ ಈ ತಿಂಗಳ ೨೨ರಂದು ಬಿಡುಗಡೆಯಾಗಬೇಕಿದೆ.