ಪೊಳಲಿ: ಫಲ್ಗುಣಿ ನದಿಯ ತಟದಲ್ಲಿ ನೆಲೆಯಾಗಿರುವ ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯ ಸನ್ನಿಧಿಯು ನಿನ್ನೆ ಮುಂಜಾನೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಅತ್ಯಪೂರ್ವ ದಾರು ಶಿಲ್ಪ-ಶಿಲಾಶಿಲ್ಪ ಸಹಿತವಾಗಿ ನಿರ್ಮಿಸಲಾಗಿರುವ ನೂತನ ದೇಗುಲದಲ್ಲಿ ಶ್ರೀ ರಾಜ ರಾಜೇಶ್ವರೀ ಹಾಗೂ ಪರಿವಾರ ದೇವತೆಗಳಿಗೆ ಬ್ರಹ್ಮಕಲಶಾಭಿಷೇಕ ಅತ್ಯಂತ ವೈಭವದಿಂದ ಜರಗಿತು.
ಸೂರ್ಯೋದಯಕ್ಕೆ ಮುನ್ನವೇ ಪ್ರಾರಂಭಗೊಂಡ ವೈದಿಕ ವಿಧಿ ವಿಧಾನ ಗಳನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಮಧ್ಯಾಹ್ನದ ಹೊತ್ತಿಗೆ ಪುಣ್ಯ ಕ್ಷಣಗಳಿಗೆ ಸಾಕ್ಷಿಯಾದ ಭಕ್ತರ ಸಂಖ್ಯೆ ಲಕ್ಷಕ್ಕೂ ಮಿಕ್ಕಿತ್ತು. ಬಹ್ವಂಶ ಭಕ್ತರು ನೇರವಾಗಿ ಬ್ರಹ್ಮಕಲಶಾಭಿಷೇಕವನ್ನು ವೀಕ್ಷಿಸಿದರೆ ಲಕ್ಷಾಂತರ ಮಂದಿ ಪರಿಸರದಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆಗಳ ಮೂಲಕ ಪುಣ್ಯ ಕಾರ್ಯವನ್ನು ಕಂಡರು.
ಒಟ್ಟು ಹತ್ತು ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವವು ವೈಭವಯುತವಾಗಿ ಮುಕ್ತಾಯಗೊಂಡಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಂಡು ಪೊಳಲಿಯ ನೂತನ ದೇಗುಲವನ್ನು ಕಂಡು ಪುನೀತರಾಗಿದ್ದಾರೆ. ದೇವರ ದರುಶನದ ಜತೆಗೆ ಊಟೋಪಹಾರ ವನ್ನು ಪಡೆದು ಸಂತುಷ್ಟರಾಗಿದ್ದಾರೆ.
ಹತ್ತೂರಿನಿಂದ ಭಕ್ತರು ಪೊಳಲಿಗೆ ಆಗಮಿಸಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಕೂಡ ಭೇಟಿ ನೀಡಿದ್ದಾರೆ. ಇನ್ನು ಒಂದು ತಿಂಗಳ ಕಾಲ ಪೊಳಲಿ ಜಾತ್ರೋತ್ಸವ ನಡೆಯಲಿದೆ.