ವೈದ್ಯರ ಮುಷ್ಕರ ಪುತ್ತೂರಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಾವು | ಗ್ರಾಮಸ್ಥರಿಂದ ನ್ಯಾಯಕ್ಕಾಗಿ ಹೋರಾಟದ ಎಚ್ಚರಿಕೆ
ಪುತ್ತೂರು : ಕಬಕದ ವಿದ್ಯಾಪುರ ನಿವಾಸಿ ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿ ಪೂಜಾ ಕಿಡ್ನಿ ವೈಪಲ್ಯದಿಂದ ಬಳಲುತಿದ್ದು ಏಕಾಏಕಿ ಇಂದು ಬೆಳಗ್ಗೆ ರೋಗ ಉಲ್ಬಣಗೊಂಡು ಸಾವನ್ನಪ್ಪಿದ್ದಾಳೆ.
ಹಿನ್ನಲೆ : ಪೂಜಾ ಈಗಾಗಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಲಿಸೀಸಸ್ ಮಾಡಲಾಗುತಿತ್ತು, ಆದರೆ, ವೈದ್ಯರ ಮುಷ್ಕರದಿಂದಾಗಿ ಡಯಲಿಸಸ್ ನೀಡಲಾಗಿಲ್ಲ. ಪೂಜಾಳನ್ನು ಎಂದಿನಂತೆ ಪುತ್ತೂರು ಸಿಟಿ ಅಸ್ಪತ್ರೆಗೆ ಕರಕೊಂಡು ಹೋದಾಗ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ನೀಡಲಾಗಲಿಲ್ಲ. ಇದರ ಪರಿಣಾಮ ವಿದ್ಯಾರ್ಥಿನಿ ಅಸುನೀಗಿದ್ದಾಳೆ.
ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ :
ವಿದ್ಯಾರ್ಥಿನಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿ ಮನೆಗಾಗಮಿಸಿದ ಗ್ರಾಮಸ್ಥರು, ವಿದ್ಯಾರ್ಥಿನಿ ಸಾವಿಗೆ ವೈದ್ಯರ ನಿರ್ಲಕ್ಷ್ಯ, ಸರಕಾರದ ಹಗಲು ಕುರುಡೇ ಕಾರಣ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯ ಕುಟುಂಬಸ್ಥರು ತೀರಾ ಕಡು ಬಡವರಾಗಿದ್ದು, ಕೂಲಿ ಕೆಲಸವೇ ಜೀವನಕ್ಕೆ ದಾರಿಯಾಗಿತ್ತು, ಆದರೆ, ಇಂದು ವಿದ್ಯಾರ್ಥಿನಿಯನ್ನೂ ಕಳೆದುಕೊಂಡು ತಾಯಿ ಮತ್ತು ತಂಗಿ ಜೀವನಕ್ಕೆ ದಾರಿಕಾಣದೆ ಪರಿತಪಿಸುತ್ತಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ನೇರ ಕಾರಣ, ಆದ್ದರಿಂದ ತಕ್ಷಣ ಶಾಸಕಿಯವರು ಮಧ್ಯಪ್ರದೇಶಿಸಬೇಕು ಈ ಸಾವಿಗೆ ಸೂಕ್ತ ನ್ಯಾಯ ದೊರಕಿಸಿ, ಪರಿಹಾರ ದೊರಕುಸಿಕೊಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿ, ಒಂದು ವೇಳೆ ಸೂಕ್ತ ಪರಿಹಾರ ದೊರಕದಿದ್ದರೆ, ಉಗ್ರಹೋರಾಟ ನಡೆಸೂದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡ ಪುರುಶೋತ್ತಮ ಮುಂಗ್ಲಿಮನೆ, ಎಸ್.ಡಿ.ಪಿ.ಐ. ಮುಖಂಡ ಯೂಸೂಪ್, ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದರು.